ತುಮಕೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ವಿರೋಧಿಸಿ ಬಿಜೆಪಿಯಿಂದ ಕರಾಳ ದಿನ ಆಚರಣೆ

Update: 2018-05-23 12:17 GMT

ತುಮಕೂರು,ಮೇ.23: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗುತ್ತಿರುವುದನ್ನು ವಿರೋಧಿಸಿ ಇಂದು ಬಿಜೆಪಿ ಕಾರ್ಯಕರ್ತರು ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಜೋತಿ ಗಣೇಶ್ ನೇತೃತ್ವದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದರು.

ನಗರದ ಟೌನ್‍ಹಾಲ್ ವೃತ್ತದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ವಿರುದ್ದ ಘೋಷಣೆ ಕೂಗಿದರಲ್ಲದೆ, ಇದೊಂದು ಅಪವಿತ್ರ ಮೈತ್ರಿ ಸರಕಾರ, ರಾಜ್ಯದ ಜನರು ಈ ಸರಕಾರಕ್ಕೆ ಮನ್ನಣೆ ನೀಡಬಾರದೆಂದು ಒತ್ತಾಯಿಸಿದರು.

ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್, ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಬಿಜೆಪಿ ಪಕ್ಷವನ್ನು ಹೊರತು ಪಡಿಸಿ, ಜನರಿಂದ ತಿರಸ್ಕೃತಗೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡುವ ಮೂಲಕ ಜನಾದೇಶದ ವಿರುದ್ದ ನಡೆದು ಕೊಳ್ಳುತ್ತೀವೆ. ಈ ಸರಕಾರದ ವಿರುದ್ದ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.

ರಾಜ್ಯಪಾಲರು ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಬಿಜೆಪಿಗೆ ಸರಕಾರ ರಚಿಸಲು ಅಹ್ವಾನ ನೀಡಿ, ಬಹುಮತ ಸಾಬೀತು ಪಡಿಸಲು 15 ದಿನ ಕಾಲಾವಕಾಶ ನೀಡಿದ್ದನ್ನು ಸುಪ್ರಿಂಕೋರ್ಟಿನಲ್ಲಿ ಪ್ರಶ್ನಿಸುವ ಮೂಲಕ ಬಹುಮತ ಸಾಬೀತಿನ ದಿನವನ್ನು ಒಂದು ದಿನಕ್ಕೆ ಕಡಿತಗೊಳಿಸಿದ್ದಲ್ಲದೇ, ಜನಪರ ಕಾಳಜಿ ಹೊಂದಿರುವ ಶಾಸಕರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡದಂತೆ ರೆಸಾರ್ಟ್ ರಾಜಕಾರಣದ ಮೂಲಕ ಶಾಸಕರನ್ನು ಹಿಡಿದಿಟ್ಟುಕೊಂಡು ವಾಮ ಮಾರ್ಗದಲ್ಲಿ ಸರಕಾರ ರಚಿಸುತ್ತಿವೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿರುವ ಜೆ.ಡಿ.ಎಸ್ ಪಕ್ಷದ ಹೆಚ್,ಡಿ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ, ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋಗಿರುವ ಕಾಂಗ್ರೆಸ್ ಪಕ್ಷದ ಜಿ.ಪರಮೇಶ್ವರ್ ಉಪ ಮುಖ್ಯ ಮಂತ್ರಿಯಾಗುತ್ತಿರುವುದು ರಾಜ್ಯದ ಜನತೆಗೆ ಮಾಡಿದ ಅವಮಾನ. ಜನಾದೇಶಕ್ಕೆ  ಬೆಲೆ ಇಲ್ಲದ ಸರಕಾರ ಇದು ಜನ ವಿರೋಧಿ ಸರಕಾರ ಎಂದು ದೂರಿದರು.

ರೈತರ ಸಾಲ ಪೂರ್ಣ ಬಹುಮತ ಬಂದರೆ ಮಾತ್ರ ಎಂದು ಷರತ್ತು ಹಾಕಿದ ಹೆಚ್.ಡಿ. ಕುಮಾರಸ್ವಾಮಿರವರಿಗೆ ಪೂರ್ಣ ಬಹುಮತವಿಲ್ಲದೆ ಮುಖ್ಯ ಮಂತ್ರಿಯಾಗಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಈ ಸರಕಾರದ  ಆಯಸ್ಸು ಬಹಳ ಕಡಿಮೆಯಾದ್ದರಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಜನತೆ ಬೇಸರಗೊಳ್ಳುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಬಿ.ಎಸ್.ವೈ ನೇತೃತ್ವದ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು. 

ಈ ವೇಳೆ ನಗರಾಧ್ಯಕ್ಷ ಸಿ.ಎನ್.ರಮೇಶ್ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವೀಶ್ , ಮಹಾನಗರಪಾಲಿಕೆ ಸದಸ್ಯರಾದ ಕರುಣಾರಾಧ್ಯ, ರುದ್ರೇಶ್, ನಿರಂಜನ್, ಎಸ್.ಟಿ.ಡಿ. ನಾಗರಾಜ್, ವೇದಮೂರ್ತಿ, ವಿರುಪಾಕ್ಷಪ್ಪ, ವೆಂಕಟೇಶ್, ಬಂಬು ಮೋಹನ್ ಟಿ.ಹೆಚ್. ಹನುಮಂತರಾಜು, ಗಣೇಶ್‍ಬಾವಿಕಟ್ಟೆ , ಜ್ಯೋತಿ ತಿಪ್ಪೇಸ್ವಾಮಿ, ಭಾರತಿ, ಗೀತಾ ಶಿವಣ್ಣ,ಅಂಬಿಕಾ ಮಹೇಶ್, ವಿನಯ್ ಹಿರೇಹಳ್ಳಿ,ಸಿದ್ದರಾಜುಗೌಡ, ಶಂಭುಲಿಂಗಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News