ತುಮಕೂರು: ಅಯಿಲ್ ಕಂಪನಿಗಳ ವಿರುದ್ಧ ಕ್ರಮಕ್ಕೆ ಕೃಷಿಕ ಸಮಾಜದ ಮುಖಂಡರ ಒತ್ತಾಯ
ತುಮಕೂರು,ಮೇ.23: ಕೆಲವು ವೇಸ್ಟ್ ಆಯಿಲ್ ರಿಫೈನರಿ ಕಾರ್ಖಾನೆಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಕೂಡಲೇ ಪರಿಸರ ಮಾಲಿನ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಭಾರತೀಯ ಕೃಷಿಕ ಸಮಾಜದ ಮುಖಂಡ ಕೋಡಿಹಳ್ಳಿ ಜಗದೀಶ್ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತುಮಕೂರು ತಾಲೂಕು, ಕೋರಾ ಹೋಬಳಿ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಮೊದಲನೇ ಹಂತದಲ್ಲಿರುವ ಎ.ಎಸ್.ರಿಫೈನರಿ, ಮಹಾಲಕ್ಷ್ಮೀ ಇಂಡಸ್ಟ್ರೀಸ್, ಎಫ್.ಎ.ರಿಫೈನರಿ ಕಾರ್ಖಾನೆಗಳಲ್ಲಿ ವೇಸ್ಟ್ ಆಯಿಲ್‍ನ್ನು ಪರಿಸರಕ್ಕೆ ನೇರವಾಗಿ ಬಿಡುತ್ತಿದ್ದಾರೆ. ಇದರಿಂದ ಸ್ಥಳೀಯ ನಾಗರಿಕರು, ಸುತ್ತಮುತ್ತಲಿನ ರೈತರು, ಸುಮಾರು 20 ರಿಂದ 30 ಹಳ್ಳಿಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ವೇಸ್ಟ್ ಆಯಿಲ್ ಪರಿಷ್ಕರಣೆ ಸಂದರ್ಭದಲ್ಲಿ ಮನುಷ್ಯರ ಆರೋಗ್ಯಕ್ಕೆ ಮಾರಕವಾದ ಕೆಟ್ಟ ಹೊಗೆ ಗಾಳಿಗೆ ಸೇರುತ್ತಿರುವುದರಿಂದ ಜನರು ವಿವಿಧ ಖಾಯಿಲೆಗಳಿಂದ ನರಳುವಂತಾಗಿದೆ. ಸುಮಾರು ದಿನಗಳಿಂದ ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ಹಾಗೂ ಪರಿಸರ ಕಲುಷಿತ ಗೊಂಡಿದೆ. ಇದರಿಂದ ಬಹುತೇಕ ಸ್ಥಳೀಯ ಜನರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವಂತಹ ಕೆಟ್ಟ ರೀತಿಯ ವಾಸನೆ ಬರುತ್ತಿದ್ದು, ಅಲ್ಲದೆ ಪಶು ಪಕ್ಷಿಗಳು ಸಕಲ ಜೀವ ಸಂಕುಲಕ್ಕೂ ಸಂಚಕಾರ ಒದಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಸಾಯುವ ಪರಿಸ್ಥಿತಿ ಬರುವುದೆಂದು ಅರಿತು ಕೂಡಲೇ ಸಂಸ್ಥೆಯ ಮುಖ್ಯಸ್ಥರನ್ನು ಮತ್ತು ಸಾರ್ವಜನಿಕರ ಸಭೆ ಕರೆದು ಇಲ್ಲಿ ಆಗುತ್ತಿರುವ ಮಾಲಿನ್ಯವನ್ನು ಈ ಕೂಡಲೇ ತಡೆಗಟ್ಟುವಂತೆ ಹಾಗೂ ಇಲ್ಲವಾದರೆ ಈ ಕಾರ್ಖಾನೆ ಮುಚ್ಚುವಂತೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ತುಮಕೂರು ಮತ್ತು ಬೆಂಗಳೂರುರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರು, ಸುತ್ತಮುತ್ತಲ ಗ್ರಾಮಸ್ಥರು ತಲೆನೋವು, ವಾಂತಿ, ಚರ್ಮ ರೋಗ ಸಂಬಂಧಿ ಕಾಯಿಲೆಗಳು ಹಾಗೂ ಇತರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕೂಡಲೇ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಸಚಿತನರಸಾಪುರ ಸುತ್ತಮುತ್ತಲ ಗ್ರಾಮಗಳ ಜನರು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಗದೀಶ್ ಮನವಿಯಲ್ಲಿ ತಿಳಿಸಿದ್ದಾರೆ.