ಕುಮಾರಸ್ವಾಮಿ ಶಿವಾಚಾರ್ಯ ಸ್ವಾಮೀಜಿಯ ಕ್ಷಮೆ ಕೇಳಲಿ: ಯಡಿಯೂರಪ್ಪ

Update: 2018-05-23 16:29 GMT

ಬೆಂಗಳೂರು,ಮೇ.23: ಸಿಎಂ ಕುಮಾರಸ್ವಾಮಿಯವರು ಸ್ವಾಮೀಜಿಗಳು ನೇರವಾಗಿ ರಾಜಕಾರಣಕ್ಕೆ ಬರಲಿ ಎಂದು ಹೇಳಿ ಸಮಸ್ತ ಮಠಾಧೀಶರಿಗೆ ಹಾಗೂ ಸ್ವಾಮೀಜಿಗಳಿಗೆ ಅಗೌರವ ತೋರಿದ್ದು, ಅವರು ಕೂಡಲೇ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಕ್ಷಮೆಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

'ಮುಖ್ಯಮಂತ್ರಿಯಾಗಿ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ 'ರಾಜಕೀಯಕ್ಕೆ ನೇರವಾಗಿ ಬನ್ನಿ' ಎಂದು ಕರೆ ನೀಡುವ ಮೂಲಕ ಉದ್ದಟತನ ಪ್ರದರ್ಶಿಸಿದ್ದೀರಿ. ಇದು ಸಮಸ್ತ ಮಠಾಧೀಶರಿಗೆ ಹಾಗೂ ಸ್ವಾಮೀಜಿಗಳಿಗೆ ತೋರಿರುವ ಅಗೌರವ. ಪರಿಸ್ಥಿತಿ ಕೈಮೀರುವ ಮುನ್ನ ಕ್ಷಮೆಯಾಚಿಸಿ ಎಂದು ಯಡಿಯೂರಪ್ಪ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯು ತನ್ನ ಹೇಳಿಕೆಯಲ್ಲಿ, 'ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲೇ ಭರವಸೆ ನೀಡಿದ್ದರು. ಈಗ ಅವರ ನಾಲಿಗೆ ಹೊರಳುತ್ತಿದೆ. ರಾಜಕೀಯ ನಾಟಕ ಹೇಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಆದರೆ, ಅವರ ಸಾಲ ಮನ್ನಾ ಮಾಡಲು ಬದ್ಧವಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿಯು 'ಸ್ವಾಮೀಜಿಗಳು ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು. ಇಲ್ಲದಿದ್ದರೆ, ನೇರವಾಗಿ ರಾಜಕಾರಣಕ್ಕೆ ಬಂದು ಬಿಡಲಿ' ಎಂದು ತಿರುಗೇಟು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News