ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ: ಎಚ್.ಡಿ.ಕುಮಾರಸ್ವಾಮಿ

Update: 2018-05-23 16:44 GMT

ಮೈಸೂರು,ಮೇ.23: ಪ್ರಸ್ತುತ  ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ, ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ಬುಧವಾರ ಬೆಳಿಗ್ಗೆ ಆಗಮಿಸಿದ ಅವರು ತಾಯಿ ಶ್ರೀಚಾಮುಂಡೇಶ್ವರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಈಗಿನ ಪರಿಸ್ಥಿತಿಯಲ್ಲಿ ಸಿಎಂ ಆಗುತ್ತಿರುವುದು ನನಗೆ ಸಂಪೂರ್ಣ ತೃಪ್ತಿ ತಂದಿಲ್ಲ. ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕೆಂಬುದು ನನ್ನ ಆಸೆಯಾಗಿತ್ತು.  ಆದರೆ ಜನರ ತೀರ್ಪಿಗೆ ನಾವು ತಲೆಬಾಗಲೇ ಬೇಕು, ಪರಮೆಶ್ವರ್ ಅವರು ನನ್ನೊಂದಿಗೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸಚಿವ ಸಂಪುಟದ ಸದಸ್ಯರ ಪ್ರಮಾಣವಚನ ನಂತರ ಯಾವ ರೀತಿ ಯೋಜನೆಗಳನ್ನು ಜಾರಿಗೆ ತರಬೇಕು ಹಾಗೂ ರೈತರ ಸಾಲ ಮನ್ನಾ ಕುರಿತು ಚರ್ಚಿಸಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಸಾಲ ಮನ್ನಾ ವಿಚಾರಕ್ಕೆ ಪ್ರತಿಕ್ರಿಯಿಸಿ ಯೂ ಟರ್ನ್, ರೈಟ್ ಟರ್ನ್ ಯಾವುದೂ ಇಲ್ಲ. ಸಾಲ ಮನ್ನಾಕ್ಕೆ ಸಮಯ ಬೇಕು ಅಷ್ಟೆ. ಸಮ್ಮಿಶ್ರ ಸರ್ಕಾರವಾದ ಕಾರಣ ಕಾಂಗ್ರೆಸ್ ಪಕ್ಷವನ್ನು ವಿಶ್ವಾಸಕ್ಕೆ ಪಡೆದು ಆಡಳಿತ ಮಾಡಬೇಕಾಗಿದೆ. ರೈತರ ಸಾಲ ಮನ್ನಾ ಬಗ್ಗೆ ಗಂಭೀರ ಚಿಂತನೆ ಆರಂಭವಾಗಿದೆ, ರೈತರು ಹಾಗೂ ರೈತ ಮುಖಂಡರು ತಾಳ್ಮೆ ವಹಿಸಬೇಕು. ನಾನು ನೀಡಿದ ವಾಗ್ದಾನಗಳನ್ನು ಈಡೇರಿಸದೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಜನರ ಮಧ್ಯೆ ಬೆಳೆದವನು. ಅವರಿಗೋಸ್ಕರನೇ ಅಧಿಕಾರಕ್ಕೆ ಬಂದಿರೋದು ಎಂಬ ನಂಬಿಕೆ ಇರಲಿ. ರೈತರ ಪರಿಸ್ಥಿತಿ ಕೇವಲ ಸಾಲ ಮನ್ನಾಕ್ಕೆ ಸೀಮಿತಗೊಳಿಸುವುದಿಲ್ಲ. ಇಸ್ರೇಲ್ ಮಾದರಿಯ ಕೃಷಿ ನೀತಿ ಸೇರಿದಂತೆ ಹಲವಾರು ಸುಧಾರಿತ ಕೃಷಿ ತರುವ ಆಲೋಚನೆ ಇದೆ. ನನ್ನ ಕಾರ್ಯ ವೈಖರಿ ಎಂದಿನಂತೆಯೇ ಇರುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಇತಿಮಿತಿಗಳ ನಡುವೆ ಉತ್ತಮ ಆಡಳಿತ ನೀಡುತ್ತೇನೆ. ಜನಸಾಮಾನ್ಯರಿಗೆ ಸಿಎಂ ಮನೆ ಬಾಗಿಲು ಸದಾ ತೆರದಿರುತ್ತದೆ. ಜನಸಾಮಾನ್ಯರಿಗೆ ನೇರವಾಗಿ ಸ್ಪಂದಿಸುವುದೇ ನನ್ನ ಉದ್ದೇಶ. ರೈತ ಮುಖಂಡರು ಜಾತಿ ನೆಲೆಯಲ್ಲಿ ಆಲೋಚನೆ ಮಾಡಬಾರದು. ಬಿಜೆಪಿಯವರು ಕರಾಳ ದಿನಾಚರಣೆ ಮಾಡಲಿ, ಅಭ್ಯಂತರವಿಲ್ಲ. ವಿಶ್ವಾಸಮತ ಮುಗಿದ ಮೇಲೆ ರಾಜಕಾರಣ ಬದಿಗಿಟ್ಟು ರಾಜ್ಯ ಕಟ್ಟುವ ಕೆಲಸದಲ್ಲಿ ಅವರು ಭಾಗಿಯಾಗಲಿ ಎಂದು ಸಲಹೆ ನೀಡಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಪಾತ್ರ ಏನೆಂದು ಕೇಳಿದ್ದಕ್ಕೆ ಇನ್ನೆರಡು ದಿನದಲ್ಲಿ ತಿಳಿಸುತ್ತೇನೆ ಎಂದರು. ನನ್ನ ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್‍ನ ಜನಪ್ರಿಯ ಕಾರ್ಯಕ್ರಮಗಳು ಮುಂದುವರೆಯುತ್ತವೆ. ನನ್ನ ಗ್ರಾಮವಾಸ್ತವ್ಯ, ಜನತಾದರ್ಶನ ಕಾರ್ಯಕ್ರಮ ಮುಂದುವರೆಯಲಿದೆ. ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗದಂತೆ ಸಾಲಮನ್ನಾದ ನಿರ್ಧಾರ ಮಾಡುತ್ತೇನೆ. ಬಿಜೆಪಿಯವರಿಗೆ ಕಾಣೋದೆಲ್ಲ ಹಳದಿಯೇ. ಅವರು ಪ್ರತಿಭಟನೆ ಮಾಡೋದಾದರೆ ಮಾಡಿಕೊಳ್ಳಲಿ. ಅಭ್ಯಂತರ ಇಲ್ಲ. ನಾನು ಸದಾ ಜನರ ಮಧ್ಯೆ ಇರುವ ಸಿಎಂ ಆಗಿರುತ್ತೇನೆ ಎಂದು ತಿಳಿಸಿದರು.

ನಿಫಾ ವೈರಸ್ ಕುರಿತು ಪ್ರತಿಕ್ರಿಯಿಸಿದ ಅವರು ಕೇರಳದಾದ್ಯಂತ ಮಾರಕ ನಿಫಾ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ ಹತ್ತು ಮಂದಿ ಮೃತಪಟ್ಟಿದ್ದಾರೆ.  ಕೇರಳಕ್ಕೆ ಹೊಂದಿಕೊಂಡಿರುವ ನಮ್ಮ ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೂ ಈ ವೈರಾಣು ವ್ಯಾಪಿಸುವ ಸಾಧ್ಯಗಳಿವೆ. ಆದ್ದರಿಂದ ವೈರಾಣು ಸೋಂಕು ತಡೆಯಲು ಅಗತ್ಯ, ಸೂಕ್ತ ಕ್ರಮ ಕೈಗೊಳ್ಳುಕುವಂತೆ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಾನು ಈಗಾಗಲೇ ಆದೇಶಿಸಿದ್ದೇನೆ ಎಂದರು.
 
ಇದಕ್ಕೂ ಮೊದಲು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಕುಮಾರಸ್ವಾಮಿ ದಂಪತಿಗಳನ್ನು ದೇವಸ್ಥಾನದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪ್ರಧಾನ ಆಗಮಿಕ ಶಶಿಶೇಖರ ಧೀಕ್ಷಿತ್ ಕುಮಾರಸ್ವಾಮಿ ಅವರಿಗೆ ಶಾಲು ಹೊದಿಸಿ, ಹಾರಹಾಕಿ ದೇವರ ವಿಗ್ರಹ ನೀಡಿ ಗೌರವಿಸಿದರು.

ಸುತ್ತೂರು ಶ್ರೀ ಭೇಟಿ ಮಾಡಿದ ಕುಮಾರಸ್ವಾಮಿ: ಇದೇ ವೇಳೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಆಗಮಿಸಿದ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಸುತ್ತೂರು ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬಳಿಕ ಸ್ವಾಮೀಜಿಗಳ ಜೊತೆಯಲ್ಲಿ ಕುಮಾರಸ್ವಾಮಿ ಸುಮಾರು ಹತ್ತು ನಿಮಿಷಗಳಿಗೂ ಹೆಚ್ಚು ಸಮಯ ಗೌಪ್ಯ ಮಾತುಕತೆ ನಡೆಸಿದರು.

ಶಾಸಕ ಜಿ.ಟಿ.ದೇವೇಗೌಡ ಪತ್ನಿ ಲಲಿತ, ಪುತ್ರ ಹರೀಶ್ ಗೌಡ, ಮಾಜಿ ಮೇಯರ್ ರವಿಕುಮಾರ್, ಜೆಡಿಎಸ್ ಮುಖಂಡರಾದ ಕೆ.ವಿ.ಮಲ್ಲೇಶ್, ರವಿಚಂದ್ರ ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹ ಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಸೇರಿದಂತೆ ಹಲವಾರು ಮುಖಂಡರು ಕುಮಾರಸ್ವಾಮಿ ಜೊತೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News