ಮೈಸೂರು: ತಮಿಳುನಾಡು ರೈತರ ಮೇಲಿನ ಗೋಲಿಬಾರ್ ಖಂಡಿಸಿ ಪ್ರತಿಭಟನೆ

Update: 2018-05-23 16:46 GMT

ಮೈಸೂರು,ಮೇ.23: ತಾಮ್ರ ಮಿಶ್ರಣ ಘಟಕದಿಂದಾಗುವ ಪರಿಸರ ಮತ್ತು ಇತರೆ ಅನಾಹುತಗಳ ಕಾರಣ ತಾಮ್ರ ಘಟಕಗಳನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಮಿಳುನಾಡಿನ ತೂತುಕುಡಿಯಲ್ಲಿ ನಿನ್ನೆ ಚಳುವಳಿ ನಡೆಸಿದ ಜನರ ಮೇಲೆ ಗುಂಡು ಹಾರಿಸಿ ಹತ್ತು ಜನರನ್ನು ಬಲಿ ತೆಗೆದುಕೊಂಡ ಮತ್ತು ಹಲವಾರು ಜನರಿಗೆ ನೋವುಂಟು ಮಾಡಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ನ್ಯಾಯಾಲಯದ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ತಮಿಳುನಾಡು ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಗೋಲಿಬಾರ್ ನಡೆಸಿ ಸಾವು ನೋವಿಗೆ ಕಾರಣವಾಗಿರುವುದಕ್ಕೆ ತಮಿಳುನಾಡು ಸರ್ಕಾರ ಜನತೆಯನ್ನು ಕ್ಷಮೆಯಾಚಿಸಬೇಕು. ಮುನ್ನೆಚ್ಚರಿಕೆ ವಹಿಸಿ ಶಾಂತಿಯನ್ನು ಕಾಪಾಡಬಹುದಾಗಿದ್ದ ಅಲ್ಲಿನ ಜಿಲ್ಲಾ ಕಲೆಕ್ಟರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ತಾಮ್ರ ಮಿಶ್ರಣ ಘಟಕ ಸ್ಥಾಪನೆ ವಿರುದ್ಧ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದು, ಈ ಘಟಕವನ್ನು ಸ್ಥಗಿತಗೊಳಿಸಬೇಕು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸದು ಎಂದು ತಮಿಳುನಾಡು ಸರ್ಕಾರ ಘೋಷಣೆ ಮಾಡಬೇಕು. ಗೋಲಿಬಾರ್ ನಲ್ಲಿ ಮರಣಹೊಂದಿರುವವರ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರವನ್ನು ನೀಡಬೇಕು. ಅಧಿಕಾರಕ್ಕೆ ಬಂದ 24ಗಂಟೆಯೊಳಗೆ ರಾಜ್ಯದ ರೈತರ ಕೃಷಿ ಸಾಲಮನ್ನಾ ಮಾಡುವುದಾಗಿ ಜನತೆಯ ಮುಂದೆ ಘೋಷಣೆ ಮಾಡಿದ್ದ ಎಚ್.ಡಿ.ಕುಮಾರಸ್ವಾಮಿ ಮಾತು ತಪ್ಪದೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಡಗಲಪುರ ನಾಗೇಂದ್ರ, ಸರಗೂರು ನಟರಾಜ್, ಹೆಚ್.ಸಿ.ಲೋಕೇಶ್ ರಾಜೇ ಅರಸ್, ಹೊಸೂರು ಕುಮಾರ್, ಹೊಸಕೋಟೆ ಬಸವರಾಜ್, ಪಿ.ಮರಂಕಯ್ಯ, ವಿದ್ಯಾಸಾಗರ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News