‘ನಿಫ್ಹಾ’ ವೈರಸ್ ಹರಡದಂತೆ ಕೊಡಗಿನಲ್ಲಿ ತೀವ್ರ ನಿಗಾ: ಜಿಲ್ಲಾಧಿಕಾರಿ ಶ್ರೀವಿದ್ಯಾ

Update: 2018-05-23 16:57 GMT

ಮಡಿಕೇರಿ,ಮೇ.23: ಕೇರಳದಲ್ಲಿ ಹಲವಾರು ಮಂದಿಯ ಸಾವಿಗೆ ಕಾರಣವಾಗಿರುವ ‘ನಿಫ್ಹಾ’ ವೈರಸ್ ಬಗ್ಗೆ ಗಡಿ ಜಿಲ್ಲೆಯಾದ ಕೊಡಗಿನಲ್ಲಿ ತೀವ್ರ ನಿಗಾವಹಿಸಿ, ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಕಾರಣವಿಲ್ಲವೆಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ನಿಫ್ಹಾ ವೈರಸ್ ಜ್ವರದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಿದ್ದೂ ಕಾಯಿಲೆಯ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಪೂರಕ ಜಾಗೃತಿ ಮೂಡಿಸುವ ಕಾರ್ಯವನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್: ನಿಫ್ಹಾ ವೈರಸ್ ಪ್ರಕರಣಗಳು ಪತ್ತೆಯಾದಲ್ಲಿ ಅಗತ್ಯ ಚಿಕಿತ್ಸೆ ಒದಗಿಸುವುದಕ್ಕೆ ಪೂರಕವಾಗಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಸಿಗೆಯ  ‘ಐಸೋಲೇಟೆಡ್ ವಾರ್ಡ್’ ಸಜ್ಜುಗೊಳಿಸಲಾಗಿದೆ. ಇಲ್ಲಿ ರೋಗಿಗೆ ಅಗತ್ಯ ಚಿಕಿತ್ಸೆ ನೀಡುವ ಸಿಬ್ಬಂದಿಯ ಆರೋಗ್ಯ ಸಂರಕ್ಷಣೆಗೆ ಅಗತ್ಯವಾದ ಗ್ಲೌಸ್, ಮಾಸ್ಕ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆಯೆಂದು ಶ್ರೀವಿದ್ಯಾ ಮಾಹಿತಿ ನೀಡಿದರು.

ಕರ್ನಾಟಕದ ಗಡಿಭಾಗವಾದ ಕೊಡಗಿಗೆ ನೆರೆಯ ಕೇರಳ ರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಅಂತಹವರಿಗೂ ನಿಫ್ಹಾ ವೈರಸ್ ಬಗ್ಗೆ ಮಲಯಾಳಂ ಭಾಷೆಯಲ್ಲಿಯೇ ಸಿದ್ಧಪಡಿಸಿರುವ ಮಾಹಿತಿ ಪತ್ರಗಳ ಮೂಲಕ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಜ್ವರ ಬಂದಲ್ಲಿ ಯಾರೂ ಸ್ವತಃ ತಾವೇ ಔಷಧಿಗಳನ್ನು ತೆಗೆದುಕೊಳ್ಳದೆ ತಕ್ಷಣವೆ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕು ಮತ್ತು ಜ್ವರವಿರುವವರು ಪ್ರಯಾಣಿಸದಂತೆ ಕಿವಿ ಮಾತುಗಳನ್ನಾಡಿದ್ದಾರೆ.

ಪಕ್ಷಿಗಳು ತಿಂದ ಹಣ್ಣುಗಳನ್ನು ತಿನ್ನದಿರಿ: ನಿಫ್ಹಾ ವೈರಸ್ ಬಾವುಲಿಗಳ ಮೂಲಕ ಹರಡುತ್ತಿರುವ ಹಿನ್ನೆಲೆಯಲ್ಲಿ, ಯಾವುದೇ ಪ್ರದೇಶದಲ್ಲಿ ಬಾವುಲಿಗಳು, ಪಕ್ಷಿಗಳು ತಿಂದು ಬಿಟ್ಟಂತಹ ಹಣ್ಣುಗಳನ್ನು ಯಾವುದೇ ಕಾರಣಕ್ಕು ಯಾರೂ ಸೇವಿಸಬಾರದೆಂದು  ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ನಿಫ್ಹಾ ವೈರಸ್ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಪಟ್ಟಣ ಪ್ರದೇಶಗಳ ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣುಗಳ ಮಾರಾಟ ಮಾಡದಂತೆ ಸ್ಪಷ್ಟ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಈ ನಿಟ್ಟಿನಲ್ಲಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೆಂದು ಹೇಳಿದರು.

ನಿಫ್ಹಾ ವೈರಸ್ ಹಂದಿಗಳ ಮೂಲಕವೂ ಹರಡುತ್ತದಾದ್ದರಿಂದ ಜಿಲ್ಲಾ ವ್ಯಾಪ್ತಿಯಲ್ಲಿರುವ ಹಂದಿ ಸಾಕಣೆದಾರರು ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಪಶು ವೈದ್ಯ ಇಲಾಖೆಯ ಅಂಕಿ ಅಂಶದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಅಂದಾಜು 40 ಸಾವಿರ ಹಂದಿಗಳಿವೆ. ಈ ಹಂದಿಗಳನ್ನು ಸಾಕುವವರು ಅವುಗಳ ಪಾಲನೆ ಪೋಷಣೆ ಸಂದರ್ಭ ಕೈಗಳಿಗೆ ಗ್ಲೌಸ್, ಮಾಸ್ಕ್ ಹಾಕಿ ಕೊಳ್ಳುವುದರೊಂದಿಗೆ ತಮ್ಮ ಆರೋಗ್ಯ ಸಂರಕ್ಷಣೆಗೆ ಆದ್ಯ ಗಮನ ಹರಿಸಬೇಕೆಂದು ಸ್ಪಷ್ಟಪಡಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ: ಜಿಲ್ಲಾ ವ್ಯಾಪ್ತಿಯ ಯಾವುದೇ ಖಾಸಗಿ ಇಲ್ಲವೆ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರ ಬಾಧೆಯ ಪ್ರಕರಣಗಳು ಬಂದ ಸಂದರ್ಭ ಚಿಕಿತ್ಸೆ ನೀಡುವುದನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಬಾರದೆಂದು ಈಗಾಗಲೆ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಆರೋಗ್ಯ ಸಹಾಯವಾಣಿ 104- ನಿಪಾ ವೈರಸ್ ಜ್ವರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗದೆ, ಅಗತ್ಯ ನೆರವು ಮತ್ತು ಮಾಹಿತಿ ಬೇಕಿದ್ದಲ್ಲಿ ಸಹಾಯವಾಣಿ 104ನ್ನು ಸಂಪರ್ಕಿಸಬಹುದೆಂದು ಮಾಹಿತಿಯನ್ನಿತ್ತರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ನಿಫ್ಹಾ ವೈರಸ್ ನೀರಿನ ಅಂಶವನ್ನು ಹೊಂದಿದ ಜೊಲ್ಲು, ಮೂತ್ರ, ರಕ್ತದಲ್ಲಿರುವ ಹಿನ್ನೆಲೆಯಲ್ಲಿ ಹಂದಿ ಸಾಕಣೆದಾರರು ಈ ಬಗ್ಗೆ ತೀವ್ರ ನಿಗಾ ವಹಿಸಬೇಕು ಮತ್ತು ತಾವು ಸಾಕುತ್ತಿರುವ ಹಂದಿಗಳಲ್ಲಿ ಯಾವುದಾದರು ಸಂಶಯಾಸ್ಪದ ರೀತಿಯ ವರ್ತನೆಗಳನ್ನು ತೋರುತ್ತಿದ್ದಲ್ಲಿ ತಕ್ಷಣವೇ ಅದನ್ನು ಇತರ ಹಂದಿಗಳಿಂದ ಪ್ರತ್ಯೇಕಿಸಬೇಕೆಂದು ಸಲಹೆಯನ್ನಿತ್ತು, ಸ್ವಚ್ಛತೆಯನ್ನು ಕಾಯ್ದುಕೊಂಡಲ್ಲಿ ರೋಗ ಬಾರದಂತೆ ತಡೆಗಟ್ಟಬಹುದಾಗಿದೆ ಎಂದರು.

ಕ್ಷಿಪ್ರ ಕಾರ್ಯಪಡೆ: ನಿಪಾ ವೈರಸ್ ಬಾರದಂತೆ ತಡಗಟ್ಟುವ ನಿಟ್ಟಿನಲ್ಲಿ ಈಗಾಗಲೆ ಪಶು ಪಾಲನಾ ಇಲಾಖೆಯ ಸಹಕಾರದೊಂದಿಗೆ ‘ ಕ್ಷಿಪ್ರ ಕಾರ್ಯಪಡೆ’ಯನ್ನು ಸಜ್ಜುಗೊಳಿಸಲಾಗಿದ್ದು, ಯಾವುದೇ ಭಾಗದಲ್ಲಿ ರೋಗ ಪ್ರಕರಣಗಳು ಪತ್ತೆಯಾದರು ತಕ್ಷಣ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆಂದು ಸ್ಪಷ್ಟಪಡಿಸಿದರು. 

ನೀರಾ ಇಳಿಸುವವರಿಗೆ ಎಚ್ಚರಿಕೆ: ಜಿಲ್ಲೆಯ ಹಲವೆಡೆಗಳಲ್ಲಿ ನೀರಾ, ಸೇಂದಿ ಇಳಿಸುವುದನ್ನು ಕಾಣಬಹುದಾಗಿದ್ದು, ಈ ಸಂದರ್ಭದಲ್ಲು ನಿಪಾ ವೈರಸ್ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯವೆಂದು  ತಿಳಿಸಿದರು. 

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಜಗದೀಶ್ ಅವರು ಮಾತನಾಡಿ, ನಿಫ್ಹಾ ವೈರಾಣು ಪತ್ತೆ ಪರೀಕ್ಷೆಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆ ಪುಣೆಯಲ್ಲಿ ಮತ್ತು ಮಣಿಪಾಲ್ ಕೆಎಂಸಿಯಲ್ಲಿ ಈ ಪರೀಕ್ಷೆ  ನಡೆಸಲಾಗುತ್ತದೆಂದು ಮಾಹಿತಿ ನೀಡಿ, ಜಿಲ್ಲೆಯಲ್ಲಿನ ಯಾವುದೇ ಸಂಶಯಾಸ್ಪದ ಪ್ರಕರಣದ ಸ್ಯಾಂಪಲ್‍ನ ಪರೀಕ್ಷೆಯನ್ನು 24 ಗಂಟೆಗಳ ಒಳಗೆ ಮಾಡುವ ಮೂಲಕ ಫಲಿತಾಂಶವನ್ನು ಕಂಡುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಿವ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News