ಚಿಕ್ಕಮಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯಿಂದ ಜನಮತ ವಿರೋಧಿ ದಿನಾಚರಣೆ

Update: 2018-05-23 17:56 GMT

ಚಿಕ್ಕಮಗಳೂರು, ಮೇ 23: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯರ್ತರು ಕಪ್ಪುಪಟ್ಟಿ ಧರಿಸಿ, ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಜನಮತ ವಿರೋಧಿ ದಿನ ಆಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಮೇ.12ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುತ್ತಿರುವುದು ಖಂಡನೀಯ ಎಂದರು. 

ತಮ್ಮ ಪಕ್ಷಕ್ಕೆ ಬಹುಮತ ಬಂದಿದ್ದರೆ ರೈತರ ಸಾಲಮನ್ನಾ ಮಾಡುತ್ತಿದ್ದೆ ಎಂಬುದಾಗಿ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶೃಂಗೇರಿಯಲ್ಲಿ ಹೇಳಿದ್ದಾರೆ. ಈ ಮೂಲಕ ಜೆಡಿಎಸ್‍ಗೆ ಜನಾದೇಶ ದೊರೆತಿವಿಲ್ಲವೆಂದು ಸ್ವತಃ ಕುಮಾರಸ್ವಾಮಿ ಒಪ್ಪಿಕೊಂಡಿರುತ್ತಾರೆ. ಅಲ್ಲದೆ ಲೋಕಾಯುಕ್ತ ಬಲಪಡಿಸಿ ಹಗರಣ ನಡೆಸಿದವರನ್ನು ಜೈಲಿಗೆ ತರುತ್ತೇನೆ ಎಂದಿದ್ದ ಕುಮಾರಸ್ವಾಮಿ ಈಗ ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು. 

ಚುನಾವಣೆ ಪ್ರಣಾಳಿಕೆ ಮತ್ತು ಚುನಾವಣಾ ವೇಳೆ ಕೊಟ್ಟ ಮಾತಿಗೆ ಕುಮಾರಸ್ವಾಮಿ ಬದ್ಧರಾಗಿಲ್ಲ. ಕುರ್ಚಿ ಸಿಗುತ್ತಿದ್ದಂತೆ ಎಲ್ಲವನ್ನೂ ಮರೆತಿದ್ದಾರೆ. ಜನರಿಂದ ತಿರಸ್ಕೃತಗೊಂಡರೂ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸುತ್ತಿರುವುದು ಪ್ರಜಾಪ್ರಭುತ್ವದ ಅಪಹಾಸ್ಯವಾಗಿದೆ ಎಂದರು. 

ಕಾಂಗ್ರೆಸ್ 122 ಸ್ಥಾನದಿಂದ 78 ಸ್ಥಾನಕ್ಕೆ ಕುಸಿದಿದೆ. ಅದೇ ರೀತಿ ಜೆಡಿಎಸ್ 40 ಸ್ಥಾನದಿಂದ 38 ಸ್ಥಾನಕ್ಕೆ ಕುಸಿದಿದೆ. ಎರಡು ಪಕ್ಷವನ್ನು ಜನತೆ ತಿರಸ್ಕಾರಿಸಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಈ ಮೈತ್ರಿ ಸರ್ಕಾರಕ್ಕೆ ಆಯಸ್ಸು ಕಡಿಮೆ ಎಂದರು. ರೈತರ ಸಾಲಮನ್ನಾ ಮಾಡುವುದಾಗಿ ಪ್ರನಾಳಿಕೆಯಲ್ಲಿ ಹೇಳಿದ್ದ ಕುಮಾರಸ್ವಾಮಿ ತಾವು ಅಧಿಕಾರ ಹಿಡಿದ 24ಗಂಟೆಯಲ್ಲಿ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ವಕ್ತಾರ ಪ್ರೇಮ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಕೇವಲ ಅಧಿಕಾರದ ಆಸೆಯಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಬಡವರ, ರೈತರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಕ್ಕೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಬಲವಾದ ಉದ್ದೇಶ ಈ ಮೈತ್ರಿ ಸರ್ಕಾರ ಹೊಂದಿದೆ. ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗಲ್ಲ, ಎಂದು ಪರಸ್ಪರ ಟೀಕಿಸಿಕೊಂಡವರು ಇಂದು ಒಂದಾಗಿದ್ದಾರೆ. ಈ ಸರ್ಕಾರ ಬಹಳದಿನ ಉಳಿಯುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪುಪ್ಪರಾಜ್, ಹೆಚ್.ಡಿ. ತಮ್ಮಯ್ಯ, ಪ್ರೇಮ್‍ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್, ಕೋಟೆ ರಂಗನಾಥ್, ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News