ಚಿಕ್ಕಮಗಳೂರು: ಕಮಲೇಶ್‍ ಚಂದ್ರ ವರದಿ ಜಾರಿಗೆ ಆಗ್ರಹಿಸಿ ಅಂಚೆ ನೌಕರರ ಮುಷ್ಕರ

Update: 2018-05-23 17:58 GMT

ಚಿಕ್ಕಮಗಳೂರು, ಮೇ 23: ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕರ 7ನೇ ವೇತನ ಆಯೋಗದ ಕಮಲೇಶ್‍ ಚಂದ್ರರವರ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರ ಸಂಘಟನೆಯ ಕಾರ್ಯಕರ್ತರು ನಗರದ ಕೇಂದ್ರ ಅಂಚೆ ಕಚೇರಿಯ ಎದುರು ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರ 2ನೇ ದಿನವಾದ ಬುಧವಾರ ಸಹ ಮುಂದುವರೆದಿದೆ.

ದೇಶದ ಅಂಚೆ ಇಲಾಖೆಯಲ್ಲಿ 2,65,000 ಗ್ರಾಮೀಣ ಅಂಚೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಇವರ ವೇತನ ಪರಿಷ್ಕರಣೆ, ಸಾಮಾಜಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ 2016ನೇ ಸಾಲಿನಲ್ಲಿ ಕಮಲೇಶ್‍ ಚಂದ್ರರವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಸಮಿತಿ ದೇಶಾದ್ಯಂತ ಸಂಚರಿಸಿ ಪ್ರತಿಯೊಬ್ಬ ಗ್ರಾಮೀಣ ಅಂಚೆ ನೌಕರನ ಸ್ಥಿತಿಗತಿಗಳ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯು ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯಿಂದ ಅನುಮೋದನೆಗೊಂಡಿದ್ದು ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಅನುಮೋದನೆಗೊಂಡು ಕೇಂದ್ರ ಸರ್ಕಾರದ ಸಚಿವ ಸಂಪುಟದ ಅನುಮೋದನೆಗೆ ಕಳುಹಿಸಿದ್ದಾರೆ.

ಕೇಂದ್ರ ಸರ್ಕಾರ ಈ ವರದಿಯನ್ನು ಅನುಮೋದಿಸದೇ ಗ್ರಾಮೀಣ ಅಂಚೆ ನೌಕರರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಈ ಬಗ್ಗೆ ಗಮನ ಸೆಳೆಯಲು ಹಲವು ಬಾರಿ ಮುಷ್ಕರ, ಧರಣಿ, ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಒತ್ತಡ ಹಾಕಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿ ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಂಘಟಕರು ಹೇಳಿದ್ದಾರೆ.

ಈ ಪ್ರತಿಭಟನೆಯಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶೇಷಣ್ಣಗೌಡ, ಕಾರ್ಯದರ್ಶಿ ಜೋಸೇಫ್‍ಬಾರೆಟೋ,  ಸಹ ಕಾರ್ಯದರ್ಶಿ ಗಂಗಾಧರ್,  ಶಿವಶಂಕರ್, ರಮಾಮಣಿ, ಕಾವ್ಯ ಸೇರಿದಂತೆ ಹಲವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News