ನೂತನ ಸರಕಾರದ ಮುಂದಿರುವ ಸವಾಲುಗಳು

Update: 2018-05-24 04:58 GMT

ಕುಮಾರಸ್ವಾಮಿಯವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ದೇಶದ ಪ್ರಮುಖ ಪ್ರತಿಪಕ್ಷ ನಾಯಕರು ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ರಂಗವನ್ನು ಕಟ್ಟಲು ಭೂಮಿಕೆ ಸಿದ್ಧಮಾಡಿದ್ದಾರೆ. ದೇಶದಲ್ಲಿ ಪ್ರತಿಪಕ್ಷ ಮುಕ್ತ ಭಾರತ ಮಾಡಲು ಹೊರಟಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೂಟದ ಜೈತ್ರಯಾತ್ರೆಯನ್ನು ತಡೆಯಲು ಬೆಂಗಳೂರಿನಲ್ಲಿ ಸೇರಿದ ಪ್ರತಿಪಕ್ಷ ನಾಯಕರ ಸಭೆ ಸಂಕಲ್ಪ ಮಾಡಿದೆ.


ಜೆಡಿಎಸ್ ಕಾಂಗ್ರೆಸ್ ಮೈತ್ರಿತ್ವ ಸರಕಾರ ಬುಧವಾರ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಿರಿಯ ಕಾಂಗ್ರೆಸ್‌ನಾಯಕಿ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಕಮ್ಯೂನಿಸ್ಟ್ ಪಕ್ಷದ ನಾಯಕರಾದ ಸೀತಾರಾಮ ಯೆಚೂರಿ, ಡಿ. ರಾಜ, ಹಾಗೂ ಆಂಧ್ರಪ್ರದೇಶ, ಕೇರಳ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಗಳಾದ ಚಂದ್ರಬಾಬು ನಾಯಡು, ಪಿಣರಾಯಿ ವಿಜಯನ್ ಹಾಗೂ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಈ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ವಿರೋಧಿಸಿ ಬಿಜೆಪಿ ಕರಾಳ ದಿನ ಆಚರಣೆಗೆ ಕರೆ ನೀಡಿತು.ಆದರೆ, ಅದಕ್ಕೆ ಬೆಂಬಲ ಕಂಡು ಬರಲಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಕುಮಾರಸ್ವಾಮಿಯವರ ಎದುರಿಗೆ ಹಲವಾರು ಸವಾಲುಗಳಿವೆ. ಹೊಸ ತಿರುವನ್ನು ಪಡೆದಿರುವ ಕಾವೇರಿ ಬಿಕ್ಕಟ್ಟು ವಷರ್ಗಳಿಂದ ಮಹಾದಾಯಿ ಸಮಸ್ಯೆ, ಎತ್ತಿನ ಹೊಳೆ ಯೋಜನೆ ಹೀಗೆ ಹಲವಾರು ಸಮಸ್ಯೆಗಳ ಜೊತೆಗೆ ಕಾನೂನು ಇನ್ನಿತರ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ. ಇದರ ಜೊತೆಗೆ ರಾಜ್ಯಕ್ಕೆ ಉತ್ತಮ ಆಡಳಿತವನ್ನು ನೀಡಬೇಕಾಗಿದೆ. ಇಂದಿನ ಸಿದ್ದರಾಮಯ್ಯ ಸರಕಾರದ ಜನಪರ ಕಾರ್ಯಕ್ರಮಗಳನ್ನು ಅವರು ಮುಂದುವರಿಸಿಕೊಂಡು ಹೋಗಬೇಕಾಗಿದೆ,. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಸಮ್ಮಿಶ್ರ ಸರಕಾರದ ನಾಯಕತ್ವವನ್ನು ಅವರು ವಹಿಸಿರುವುದರಿಂದ ಅತ್ಯಂತ ಎಚ್ಚರಿಕೆಯ ನಡೆಯನ್ನು ಇಡಬೇಕಾಗಿದೆ.

ರಾಜ್ಯಗಳ ಚುನಾವಣೆ ನಡೆದು ಫಲಿತಾಂಶ ಬಂದಾಗ ರಾಜ್ಯದಲ್ಲಿ ಬಿಜೆಪಿಯೇತರ ಸರಕಾರ ಅಸ್ತಿತ್ವಕ್ಕೆ ಬರಲು ಬಿಡುವುದಿಲ್ಲವೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿಯವರ ನೇತೃತ್ವದ ಸರಕಾರಕ್ಕೆ ಕೇಂದ್ರ ಸರಕಾರದಿಂದ ಸಾಕಷ್ಟು ಕಿರಿಕಿರಿಯಾಗುವ ಸಂಭವವಿದೆ. ಅದನ್ನು ಎದುರಿಸಿ ತಮ್ಮ ಸರಕಾರವನ್ನು ಉಳಿಸಿಕೊಂಡು ಹೋಗಲು ಹೆಣಗಾಡಬೇಕಾಗುತ್ತದೆ. ಕೇಂದ್ರದಿಂದ ಸಾಕಷ್ಟು ಅಸಹಕಾರವನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಸರಕಾರ ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯಸರಕಾರಕ್ಕೆ ತೊಂದರೆ ಉಂಟುಮಾಡುವ ಸಂಭವವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಡಕು ಉಂಟು ಮಾಡಲು ಬಿಜೆಪಿ ಪ್ರಯತ್ನಿಸಬಹುದು. ಆದರೆ ಕುಮಾರಸ್ವಾಮಿಯವರು ಮಿತ್ರ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿಕೊಂಡು ಹೋಗಬೇಕಾಗಿದೆ. ಇಂದಿನ ಸಿದ್ದರಾಮಯ್ಯ ಸರಕಾರ ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರಿಯಬೇಕಾಗಿದೆ.ಕಳೆದ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರೈತರ ಸಂಫೂರ್ಣ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿಯವರು ಭರವಸೆ ನೀಡಿದ್ದರು.

ಈಗ ಕುಮಾರಸ್ವಾಮಿಯವರು ಮಿತ್ರ ಪಕ್ಷದ ಜೊತೆ ಚರ್ಚಿಸಿ ಚುನಾವಣೆ ಸಂದರ್ಭದಲ್ಲಿ ಹೇಳಿದ ಭರವಸೆಯನ್ನು ಈಡೇರಿಸಬೇಕು.
ಕುಮಾರಸ್ವಾಮಿಯವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ದೇಶದ ಪ್ರಮುಖ ಪ್ರತಿಪಕ್ಷ ನಾಯಕರು ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ರಂಗವನ್ನು ಕಟ್ಟಲು ಭೂಮಿಕೆ ಸಿದ್ಧಮಾಡಿದ್ದಾರೆ. ದೇಶದಲ್ಲಿ ಪ್ರತಿಪಕ್ಷ ಮುಕ್ತ ಭಾರತ ಮಾಡಲು ಹೊರಟಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೂಟದ ಜೈತ್ರಯಾತ್ರೆಯನ್ನು ತಡೆಯಲು ಬೆಂಗಳೂರಿನಲ್ಲಿ ಸೇರಿದ ಪ್ರತಿಪಕ್ಷ ನಾಯಕರ ಸಭೆ ಸಂಕಲ್ಪ ಮಾಡಿದೆ.
ಹೊಸ ಸರಕಾರದ ಸಂಪುಟ ರಚನೆ ಇನ್ನೂ ಇತ್ಯರ್ಥವಾಗಿಲ್ಲ. ಎರಡೂ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚಿಸಿ ಸಂಪುಟ ರಚನೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗಿದೆ.
ಹೊಸ ಸರಕಾರದ ಮೇಲೆ ರಾಜ್ಯದ ಜನತೆ ಸಾಕಷ್ಟು ಭರವಸೆ ಮತ್ತು ನಿರೀಕ್ಷೆ ಗಳನ್ನು ಇಟ್ಟುಕೊಂಡಿದ್ದಾರೆ. ಜನತೆಯ ನಿರೀಕ್ಷೆಗೆ ಹುಸಿಯಾಗದಂತೆ ಸರಕಾರ ನಡೆಸಿ ಕೊಂಡು ಹೋಗುವ ಜವಾಬ್ದಾರಿ ಮುಖ್ಯಮಂತ್ರಿಯವರ ಮೇಲೆ ಮಾತ್ರವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮೇಲೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News