ಕಾಂಗ್ರೆಸ್ ನಡೆ ಮೇಲೆ ಸಮ್ಮಿಶ್ರ ಸರಕಾರದ ಭವಿಷ್ಯ ನಿರ್ಧಾರ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-05-24 12:22 GMT

ತುಮಕೂರು,ಮೇ.24: ಕಾಂಗ್ರೆಸ್ ನಾಯಕರ ನಿಲುವು ಹಾಗೂ ನಡೆಗಳ ಮೇಲೆ ಸಮ್ಮಿಶ್ರ ಸರಕಾರದ ಭವಿಷ್ಯ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಯಾಗಿ ವಿಶ್ವಾಸಮತ ಯಾಚನೆ ಹಿನ್ನಲೆಯಲ್ಲಿ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ಡಾ.ಶಿವಕುಮಾರಸ್ವಾಮೀಜಿಯ ಆರ್ಶೀವಾದ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಿದೆ. ಹೆಜ್ಜೆ ಹೆಜ್ಜೆಗೆ ತೊಂದರೆ ಎದುರಾಗಲಿದೆ ಎನ್ನುವುದು ಗೊತ್ತಿದ್ದು, ಆದರೂ 5 ವರ್ಷ ಸುಭದ್ರ ಸರ್ಕಾರವನ್ನು ನೀಡುವ ಭರವಸೆ ವ್ಯಕ್ತಪಡಿಸಿದರು.

12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ನಡೆಸಿದ್ದ 20 ತಿಂಗಳ ಆಡಳಿತದಿಂದ ರಾಜ್ಯದಲ್ಲಿ ನಾನು ಹಾಗೂ ಪಕ್ಷ ಉಳಿದಿದೆ. ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಕಾಂಗ್ರೆಸ್ ಮುಖಂಡರ ಒತ್ತಾಯದಿಂದ ಮೈತ್ರಿಗೆ ಒಪ್ಪಿಕೊಂಡಿದ್ದೇನೆಯೇ ಹೊರತು ಅಧಿಕಾರದ ಆಸೆಗಾಗಿ ಅಲ್ಲ. ಅಧಿಕಾರಕ್ಕಾಗಿ ಯಾವುದೇ ರಾಜಿಯ ಮಾತೇ ಇಲ್ಲ ಎಂದ ಅವರು, ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸಲು ಬದ್ಧನಾಗಿದ್ದು, ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಾಗಿ ಹೇಳಿದರು.

ಕಳೆದ ಚುನಾವಣೆ ವೇಳೆ ನಾನು ಯಾವುದೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ನಾನು ಮಾತನಾಡಿರುವುದು ಕೇವಲ ರಾಜ್ಯದ ಅಭಿವೃದ್ಧಿಯ ಬಗ್ಗೆ. ಎತ್ತಿನಹೊಳೆ ಸೇರಿದಂತೆ ಇನ್ನುಳಿದ ಯೋಜನೆಗಳಲ್ಲಿ ಅಕ್ರಮಗಳಾಗಿದ್ದರೆ ನಿಲ್ಲಿಸುತ್ತೇನೆ ಎಂದು ಹೇಳಿದ್ದು, ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೂಲಕ ನನ್ನ ಸಮಯವನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ ಎಂದರು.

ವಿಧಾನಸಭೆಯಲ್ಲಿ ಮಾತನಾಡುತ್ತೇನೆ: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರಕಾರ ರಾಜಿ ಸರಕಾರವಾಗುವುದಿಲ್ಲ. ಶುಕ್ರವಾರ ವಿಶ್ವಾಸ ಮತ ಯಾಚನೆ ವೇಳೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ರಾಜ್ಯದ ಎಲ್ಲಾ ಪ್ರಜೆಗಳಿಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಸರಕಾರದ ಕಾರ್ಯದ ಬಗ್ಗೆ ಉತ್ತರಿಸುತ್ತೇನೆ. ಹಾಗೆ ತೆಗಳುವವರ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂದು ತಿಳಿಸಿದರು.

ವಿಶ್ವಾಸಮತ ಯಾಚನೆಯಾದ ಬಳಿಕವಷ್ಟೇ ನಾನು ಅಧಿಕೃತ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತೇನೆ. ನಂತರ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತೇನೆ. ಅದಕ್ಕಿಂತ ಮುಂಚಿತವಾಗಿ ನಾನು ಏನೂ ಹೇಳುವುದಿಲ್ಲ. ಎಲ್ಲದಕ್ಕೂ ಶುಕ್ರವಾರ ವಿಶ್ವಾಸ ಮತ ಸ್ವೀಕರಿಸಿದ ಬಳಿಕ ಉತ್ತರಿಸುತ್ತೇನೆ. ರಾಜ್ಯದಲ್ಲಿ ಮಕ್ಕಳ ಅಪರಹಣ ಮಾಡುವ ಕುರಿತಂತೆ ಹಬ್ಬಿರುವ ವದಂತಿಗೆ ಯಾರೂ ಕಿವಿಗೊಡುವ ಅವಶ್ಯಕತೆ ಇಲ್ಲ. ಇದು ಊಹಾಪೋಹವಾಗಿದ್ದು, ಯಾವುದೇ ಪೋಷಕರು ಹೆದರುವುದು ಬೇಡ. ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ವದಂತಿ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಗೌರಿಶಂಕರ್, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ, ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಹೆಚ್.ನಿಂಗಪ್ಪ, ಜಿ.ಪಂ.ಅಧ್ಯಕ್ಷೆ ಲತಾ ರವಿಕುಮಾರ್, ಬಿಬಿಎಂಪಿ ಮಾಜಿ ಮೇಯರ್ ಪುಟ್ಟರಾಜು, ಮುಖಂಡರಾದ ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಭಕ್ತರಿಗೆ ತಪ್ಪದ ಕಿರಿಕಿರಿ: ಚುನಾವಣೆಯಿಂದ ರಾಜಕಾರಣಿಗಳ ಕೇಂದ್ರವಾಗಿ ಮಾರ್ಪಟ್ಟಿರುವ ಸಿದ್ದಗಂಗಾ ಮಠಕ್ಕೆ ಇಂದು ಬೆಳಿಗ್ಗೆ 8.30ಕ್ಕೆ ಭೇಟಿ ನೀಡಬೇಕಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಾಹ್ನ 1.10ಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಮಠಕ್ಕೆ ದಿನನಿತ್ಯ ಆಗಮಿಸುವ ಭಕ್ತರಿಗೆ ತೊಂದರೆಯಾಯಿತು. ಬೆಳಗಿನ ಉಪಾಹಾರ, ದಾಸೋಹದ ಮನೆಗೆ ಹೋಗಲು ಅವಕಾಶ ಸಿಗದೇ ಇದ್ದರಿಂದ ಹಿಂದಿನ ಬಾಗಲಿನಿಂದ ದಾಸೋಹಕ್ಕೆ ಹೋಗಲು ಸಿದ್ದಗಂಗಾ ಮಠದ ಕಿರಿಯ ಶ್ರೀಗಳ ಕೋರಿಕೆ ಮೇರೆಗೆ ಪೊಲೀಸರು ಅವಕಾಶ ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News