ಮಡಿಕೇರಿ: ಇಂದ್ರಧನುಷ್ ಕಾರ್ಯಕ್ರಮಕ್ಕೆ ಚಾಲನೆ

Update: 2018-05-24 12:10 GMT

ಮಡಿಕೇರಿ,ಮೇ.24: ಕೊಡ್ಲಿಪೇಟೆ ಬಳಿಯ ನಿಲುವಾಗಿಲು ಗ್ರಾಮದ ಅಂಗನವಾಡಿಯಲ್ಲಿ ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.  

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಿಲೇಶ್ ಅವರು ಲಸಿಕಾ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಮಕ್ಕಳಿಂದ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.  
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಎಂ.ಎನ್.ನೀಲೇಶ್ ಅವರು ಮಾತನಾಡಿ, ಎಲ್ಲಾ ಮಕ್ಕಳಿಗೂ ಗರ್ಭಿಣಿಯರಿಗೂ ಕಾಲ ಕಾಲಕ್ಕೆ ಸರಿಯಾಗಿ ಲಸಿಕೆಯನ್ನು ನೀಡಬೇಕು. ಲಸಿಕೆಯನ್ನು ಪಡೆಯುವುದರಿಂದ ಮಾರಕ ರೋಗಗಳಿಂದ ಮುಕ್ತರಾಗಬಹುದು. ಈ ನಿಟ್ಟಿನಲ್ಲಿ ಉಪ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮಗುವಿಗೆ ಮತ್ತು ಗರ್ಭಿಣಿಯರಿಗೆ ಮಾರ್ಗಸೂಚಿಯಲ್ಲಿರುವ ಎಲ್ಲಾ ಲಸಿಕೆಗಳನ್ನು ನೀಡಲು ಯೋಜನೆಯನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. 

ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ರವಿಕುಮಾರ್ ಅವರು ಮಾತನಾಡಿ, 2018-19ರ ಸಾಲಿನ ಲಸಿಕಾ ಕ್ರಿಯಾ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದ್ದು, ಎಲ್ಲಾ ಆರೋಗ್ಯ ಕಾರ್ಯಕರ್ತೆಯರು ತಮ್ಮ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಒಂದು ಮಗುವೂ ಮತ್ತು ಗರ್ಭಿಣಿಯು ಬಿಟ್ಟು ಹೋಗದ ರೀತಿಯಲ್ಲಿ ಯೋಜನೆಯನ್ನು ರೂಪಿಸಿ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕೊಡ್ಲಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಂಗನಾಥ್ ಅವರು ಮಾತನಾಡಿ, ಎಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವಲ್ಲಿ ಶ್ರಮವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ಇನ್ನಷ್ಟು ಜನರಿಗೆ ಸದುಪಯೋಗ ಆಗುವ ರೀತಿಯಲ್ಲಿ ತಲುಪಿಸುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು 17 ಮಕ್ಕಳಲ್ಲಿ 13 ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದ್ದು, ಇನ್ನು ಉಳಿದ ಮಕ್ಕಳಿಗೆ ಜೂನ್ 21 ಮತ್ತು ಜುಲೈ 21 ರಲ್ಲಿ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಾಂತಿ, ಕೊಡ್ಲಿಪೇಟೆಯ ಪ್ರಾ.ಆ.ಕೇಂದ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಬೆಸೂರು ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News