ಮೈಸೂರು: ತೂತುಕುಡಿ ಗೋಲಿಬಾರ್ ಖಂಡಿಸಿ ಸಿಪಿಐಎಂ ಸಂಘಟನೆಗಳ ಪ್ರತಿಭಟನೆ
ಮೈಸೂರು,ಮೇ.24: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಎಂಬ ಬಹುರಾಷ್ಟ್ರೀಯ ಕಂಪನಿಗೆ ಸೇರಿದ ಸ್ಟೆರ್ ಲೈಟ್ ತಾಮ್ರ ಸಂಸ್ಕರಣಾ ಘಟಕದ ವಿಸ್ತರಣೆಯ ವಿರುದ್ಧ ಹೋರಾಡುತ್ತಿದ್ದ ಜನಸಾಮಾನ್ಯರ ಮೇಲೆ ಮೇ.22 ರಂದು ಗೋಲಿಬಾರ್ ನಡೆಸಿ 12 ಮಂದಿಯ ಸಾವು ಮತ್ತು ನೂರಾರು ಮಂದಿಯ ನೋವಿಗೆ ಕಾರಣವಾದ ತಮಿಳುನಾಡು ಸರ್ಕಾರದ ಕ್ರಮವನ್ನು ಸಿಪಿಐ(ಎಂ),ಸಿಪಿಐ,ಸಿಪಿಐ(ಎಂಎಲ್)ಲಿಬರೇಷನ್ ಮತ್ತು ಎಸ್ ಯುಸಿಐ ಪಕ್ಷಗಳು ಖಂಡಿಸಿ ಪ್ರತಿಭಟನೆ ನಡೆಸಿದರು.
ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಭಟನಾಕಾರರು, ಸುಮಾರು ಇಪ್ಪತ್ತೈದು ವರ್ಷಗಳಿಂದ ಸ್ಟೆರ್ ಲೈಟ್ ಕಂಪನಿಯು ತೂತುಕುಡಿಯಲ್ಲಿ ಉಂಟು ಮಾಡುತ್ತಿದ್ದ ಮಾಲಿನ್ಯದಿಂದಾಗಿ ಸುತ್ತಲಿನ ನೆಲ ಗಾಳಿ ಮತ್ತು ನೀರು ಕಲುಷಿತಗೊಂಡಿದ್ದು, ಜನತೆ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪರಿಸರ ಸಂರಕ್ಷಣೆಯ ನಿಯಮಗಳನ್ನು ಗಾಳಿಗೆ ತೂರಿ ವಿಷಯುಕ್ತ ಅನಿಲ ಬಿಡುಗಡೆ ಮಾಡಿದ್ದಕ್ಕಾಗಿ 2013ರಲ್ಲಿ ಈ ಕಂಪನಿಗೆ ಸರ್ವೋಚ್ಛ ನ್ಯಾಯಾಲಯ ದಂಡವನ್ನು ಕೂಡ ವಿಧಿಸಿತ್ತು. ಚುನಾಯಿತ ಸರ್ಕಾರ ಜನ ಹಿತ ಕಾಯುವ ಬದಲು ಬಂಡವಾಳಶಾಹಿ ಕಂಪನಿಯ ಹಿತ ಕಾಯಲು ಮುಂದಾಯಿತು.
ಇದರಿಂದ ಎದೆಗುಂದದೇ 20,000ಕ್ಕೂ ಹೆಚ್ಚು ಜನತೆ ಬೀದಿಗಿಳಿದು ಹೋರಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರು ನಿಶ್ಯಸ್ತ್ರರಾದ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಲ್ಲದೇ ಗೋಲಿಬಾರ್ ಮಾಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ತಕ್ಷಣವೇ ಮೃತರ ಕುಟುಂಬಿಕರಿಗೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು. ನಿಷ್ಪಕ್ಷವಾದ ನ್ಯಾಯಾಂಗ ತನಿಖೆಯನ್ನು ನಡೆಸಿ ಗೋಲಿಬಾರಿಗೆ ಕಾರಣರಾದವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಮತ್ತು ಸ್ಥಳೀಯ ಜನರ ಬೇಡಿಕೆಯಂತೆ ಸ್ಟೆರ್ ಲೈಟ್ ಕಂಪನಿಯನ್ನು ತಕ್ಷಣವೇ ಮುಚ್ಚಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ಬಸವರಾಜು, ಎಚ್.ಆರ್.ಶೇಷಾದ್ರಿ, ಬಿ.ರವಿ, ಚೌಡಳ್ಳಿ ಜವರಯ್ಯ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.