ಶಿವಮೊಗ್ಗದಲ್ಲಿ 'ನಿಫ್ಹಾ' ಪ್ರಕರಣ ವರದಿಯಾಗಿಲ್ಲ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಸಿ ವೆಂಕಟೇಶ್
ಶಿವಮೊಗ್ಗ, ಮೇ 24: 'ಶಿವಮೊಗ್ಗ ಜಿಲ್ಲೆಯಲ್ಲಿ 'ನಿಫ್ಹಾ' ವೈರಸ್ ಸೋಂಕಿಗೆ ಸಂಬಂಧಿಸಿದ ಯಾವುದೇ ಪ್ರಕರಣ ವರದಿಯಾಗಿಲ್ಲ. ನಾಗರಿಕರು ಆತಂಕಪಡುವ ಅಗತ್ಯವಿಲ್ಲ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ. ಸಿ. ವೆಂಕಟೇಶ್‍ರವರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಸಾಗರ ತಾಲೂಕಿನ ಸಿರಿವಂತೆ ಗ್ರಾಮದ 24 ವರ್ಷದ ಯುವಕನೋರ್ವ ಸುಮಾರು ಒಂದು ತಿಂಗಳ ಹಿಂದೆ ಕೇರಳ ರಾಜ್ಯದ ದೇವಾಲಯಕ್ಕೆ ಭೇಟಿ ನೀಡಿ ಹಿಂದಿರುಗಿದ್ದರು. ಇವರಲ್ಲಿ ಕಳೆದೆರೆಡು ದಿನಗಳ ಹಿಂದಷ್ಟೆ ಜ್ವರ ಕಾಣಿಸಿಕೊಂಡಿತ್ತು.
ಸಾಗರ ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು ಅವರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಪ್ರಸ್ತುತ ಆ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರು ಮನೆಯಲ್ಲಿಯೇ ಇದ್ದಾರೆ. ತಾವು ಕೂಡ ಸಾಗರಕ್ಕೆ ಭೇಟಿಯಿತ್ತು ಯುವಕನ ಜೊತೆ ಸಮಾಲೋಚನೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಯುವಕನ ರಕ್ತದ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಮಹಾರಾಷ್ಟ್ರದ ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪರೀಕ್ಷಾ ವರದಿ ಕೈ ಸೇರಿದ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಾಗಿದೆ. ಉಳಿದಂತೆ ಜಿಲ್ಲೆಯ ಯಾವುದೇ ಪ್ರದೇಶದಲ್ಲಿ 'ನಿಫ್ಹಾ' ವೈರಸ್ ಪ್ರಕರಣ ಕಾಣಿಸಿಕೊಂಡಿಲ್ಲ. ವದಂತಿಗಳಿಗೆ ನಾಗರಿಕರು ಕಿವಿಗೊಡಬಾರದು. ಗೊಂದಲಕ್ಕೊಳಗಾಗಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.