ವ್ಯಕ್ತಿ ಮೇಲೆ ಗುಂಪು ಹಲ್ಲೆ : ದುಷ್ಕರ್ಮಿಗಳ ಪತ್ತೆಗೆ ಪೊಲೀಸ್ ಕಾರ್ಯಾಚರಣೆ ಚುರುಕು
ಮಡಿಕೇರಿ, ಮೇ 25 : ಜೀಪಿನಲ್ಲಿ ಬಂದ ಗುಂಪೊಂದು ವ್ಯಕ್ತಿಯೋರ್ವನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸೋಮವಾರಪೇಟೆ ಸಮೀಪದ ಕಾಜೂರು ಗ್ರಾಮದಲ್ಲಿ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಕೆ.ಎ.ಮಂಜುನಾಥ್ ಎಂಬುವವರೆ ಹಲ್ಲೆಗೊಳಗಾದವರು. ಆರೋಪಿಗಳಾದ ಯಡವಾರೆ ಗ್ರಾಮದ ಮಂಜು, ಸಿ.ಸಿ.ಜೀವನ್, ಯೋಗೇಶ್, ಪುನೀತ್ ಅವರುಗಳ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ, ಜಾತಿನಿಂದನೆ ಮೊಕದ್ದಮೆ ದಾಖಲಾಗಿದೆ.
ಮಂಗಳವಾರ ಸಂಜೆ 5ಗಂಟೆಯ ಸುಮಾರಿಗೆ ಯಡವಾರೆ ಸೈಟ್‍ನಲ್ಲಿ ದೇವಾಲಯಕ್ಕೆ ಹೋಗುವ ವಿಚಾರದಲ್ಲಿ ಮಂಜುನಾಥ್ ಹಾಗೂ ಮಂಜು ನಡುವೆ ಮಾತಿಗೆ ಮಾತು ಬೆಳೆದು ತಳ್ಳಾಟ ನಡೆದಿದೆ. ನಂತರ ಮಾರಿಯಮ್ಮ ದೇವಾಲಯದ ಪೂಜೆಗೆ ಮಂಜುನಾಥ್ ಹೋಗಿದ್ದಾರೆ. ರಾತ್ರಿ ಪೂಜೆ ಮುಗಿಸಿದ ಮಂಜುನಾಥ್ ಅವರು ಮನೆಗೆ ತೆರಳುತ್ತಿದ್ದ ಸಂದರ್ಭ, ಜೀಪಿನಲ್ಲಿ ಬಂದ ಆರೋಪಿಗಳು, ದಾರಿಯಲ್ಲಿ ಮಂಜುನಾಥ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಜೀಪಿನಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯರು ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.