×
Ad

ಸೊರಬ : ನಿಫಾ ವೈರಸ್ ಕುರಿತು ಅರಿವು ಕಾರ್ಯಾಗಾರ

Update: 2018-05-25 17:16 IST

ಸೊರಬ,ಮೇ 25: ತಾಲ್ಲೂಕಿನಲ್ಲಿ ನಿಫಾ ವೈರಸ್ ಕುರಿತು ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ ಎಂದು ತಹಶೀಲ್ದಾರ್ ಸಿ.ಪಿ.ನಂದಕುಮಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖಾಧಿಕಾರಿಗಳೊಂದಿಗೆ ನಿಫಾ ವೈರಸ್ ಕುರಿತು ಅರಿವು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ನಿಫಾ ವೈರಸ್ ಕುರಿತು ಹಬ್ಬಿರುವ ವದಂತಿಗಳಿಗೆ ಕಿವಿಕೊಡಬಾರದು. ತಾಲ್ಲೂಕಿನಲ್ಲಿ ಇದುವರೆಗೂ ನಿಫಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ವೈರಸ್ ಕುರಿತು ಸಾರ್ವಜನಿಕರಲ್ಲಿ ಸೂಕ್ತವಾದ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಪತ್ತೆಯಾಗಿದ್ದು, ತಾಲ್ಲೂಕಿನಲ್ಲಿ ನೆಲೆಸಿರುವ ಕೇರಳಿಗರು ಆ ಭಾಗದಲ್ಲಿ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬರುವವರಗೆ ತಮ್ಮ ರಾಜ್ಯಕ್ಕೆ ಭೇಟಿ ನೀಡದಿರಲು ಮನವಿ ಮಾಡಿದರು.

ಶಿಗ್ಗಾ ಆಸ್ಪತ್ರೆಯ ವೈದ್ಯ ಡಾ. ಅರುಣಕುಮಾರ್, ತಾಲ್ಲೂಕಿನ ಕಾಸ್ವಾಡಿಕೊಪ್ಪ ಗ್ರಾಮದಲ್ಲಿ ಬಾವಲಿಗಳು (ಪಕ್ಷಿ) ಕೆಲವು ಮರಗಳಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಾವಲಿಗಳಿಂದ ಯಾವುದೇ ಅಪಾಯವಿಲ್ಲ ಎಂದು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.  ಬಾವಲಿಗಳು ಕಚ್ಚಿದ ಹಣ್ಣು ಹಂಪಲುಗಳನ್ನು ಉಪಯೋಗಿಸಬಾರದು. ಯಾವುದೇ ಹಣ್ಣುಗಳನ್ನು ಉಪಯೋಗಿಸುವ ಪೂರ್ವದಲ್ಲಿ ನೀರಿನಿಂದ ತೊಳೆದು ತಿನ್ನುವಂತೆ ಸಲಹೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ನಿಫಾ ವೈರಸ್ ಪ್ರವೇಶಿಸಿಲ್ಲ. ಸಾರ್ವಜನಿಕರು ಮುಂಜಾಗ್ರತೆಯಿಂದ ವಿಪರೀತ ತಲೆನೋವು, ವಾಂತಿ ಸೇರಿದಂತೆ ಕೆಲ ಲಕ್ಷಣಗಳು ದೇಹದಲ್ಲಿ ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆಗೆ ಒಳಪಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಆರ್.ಗಾಯಿತ್ರಿ, ವಲಯ ಅರಣ್ಯಾಧಿಕಾರಿ ಅಜಯಕುಮಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಲಚಂದ್ರ,  ವೈದ್ಯರಾದ ಡಾ.ಎಂ.ಕೆ.ಭಟ್, ಡಾ.ಸೈಯದ್ ಹಾಷಂ, ಡಾ.ಅಕ್ಷತಾ, ಡಾ.ನಿರಂಜನ್, ಡಾ.ನವೀನ್, ಇಂದೂಧರ್ ಪಾಟೀಲ್, ಹರೀಶ್, ಸಾವಿತ್ರಿ ಮತ್ತಿತರರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News