×
Ad

ಕಾಡಾನೆ-ಮಾನವ ಸಂಘರ್ಷ; ಸಭೆ ಕರೆದ ಅಧಿಕಾರಿಯೇ ಗೈರು

Update: 2018-05-25 17:59 IST

ಮಡಿಕೇರಿ, ಮೇ 25 :ಕಾಡಾನೆ-ಮಾನವ ಸಂಘರ್ಷದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರೆಯಲಾಗಿದ್ದ ಸಭೆಗೆ ಗೈರು ಹಾಜರಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವಿರುದ್ಧ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆಗಾರರ ಒತ್ತಾಯದ ಹಿನ್ನೆಲೆಯಲ್ಲಿ ಮೇ 28 ರಂದು ಅರಣ್ಯ ಇಲಾಖಾ ಪ್ರಮುಖ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ನಗರದ ಅರಣ್ಯ ಭವನದಲ್ಲಿ ಶುಕ್ರವಾರ ಬೆಳೆಗಾರರು ಮತ್ತು ಅರಣ್ಯ ಅಧಿಕಾರಿಗಳ ಸಭೆಯನ್ನು ಕರೆದಿದ್ದ ಸಿಸಿಎಫ್ ಲಿಂಗರಾಜು ಅವರು ಖುದ್ದು ಸಭೆಗೆ ಗೈರು ಹಾಜರಾಗಿದ್ದರು. ಕಾರಣ ಕೇಳಿ ದೂರವಾಣಿ ಕರೆ ಮಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಅವರಿಗೆ ಸಮರ್ಪಕವಾಗಿ ಉತ್ತರಿಸದೆ ನಿರ್ಲಕ್ಷ್ಯ ತೋರಿದಕ್ಕಾಗಿ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ರೈತ ಸಂಘ, ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಮತ್ತು ಕಾರ್ಮಿಕ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಸಿಸಿಎಫ್ ಅನುಪಸ್ಥಿತಿಯಲ್ಲಿ ಪಾಲ್ಗೊಂಡ ವನ್ಯ ಜೀವಿ ವಿಭಾಗದ ಎಸಿಎಫ್ ಎಂ.ಎಂ.ಜಯ ಅವರು,  ಬೆಳೆಗಾರರ ಬೇಡಿಕೆಯಂತೆ ಆರಂಭದಲ್ಲಿ ಸಿದ್ದಾಪುರದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದೆಂದು ತಿಳಿಸಿದರು.

ವೀರಾಜಪೇಟೆ ಅರಣ್ಯ ಭವನದಲ್ಲಿ ಮೇ 28 ರಂದು ಬೆಳಗ್ಗೆ 11 ಗಂಟೆಗೆ ಸಿಸಿಎಫ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಸಲು ನಿರ್ಧರಿಸಿ ಪಿಸಿಸಿಎಫ್ ಅವರಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳು ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ರೈತರು ಮತ್ತು ಕಾರ್ಮಿಕರ ಅರಣ್ಯ ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ಹೇಮಚಂದ್ರ ಅವರು ಮಾತನಾಡಿ, ಪ್ರಸಕ್ತ ಸಾಲಿನ ಜನವರಿ ಮತ್ತು ಫೆಬ್ರವರಿಯಲ್ಲಿ ಅರಣ್ಯ ಇಲಾಖೆಗೆ ಕಾಡಾನೆಗಳಿಂದ ಜಿಲ್ಲೆಯ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗೆಹರಿಕೆಗೆ ಮನವಿಯನ್ನು ಸಲ್ಲಿಸಿದ್ದು, ಇದರಲ್ಲಿ ಅರಣ್ಯ ಅಧಿಕಾರಿಗಳು ಪ್ರತಿ ಪಂಚಾಯತ್ ಗಳಲ್ಲಿ ‘ರೈತ ಸಂಪರ್ಕ ಸಭೆ’ ನಡೆಸಬೇಕೆಂದರು.

ಆನೆ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡುವ ಸಂದರ್ಭ ಹಲವಾರು ದಾಖಲೆಗಳನ್ನು ಕೇಳಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕಾಡಾನೆ ಹಾವಳಿಯ ಸಂದರ್ಭ ತೋಟಗಳಲ್ಲಿ ಕಾರ್ಯ ನಿರ್ವಹಿಸಲಾಗದ ಕಾರ್ಮಿಕರ ವೇತನವನ್ನು ಅರಣ್ಯ ಇಲಾಖೆ ಭರಿಸಬೇಕೆಂಬುದು ಸೇರಿದಂತೆ 13 ಅಂಶಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಬೆಳೆಗಾರರನ್ನು ಅನಗತ್ಯವಾಗಿ ಸಾಗಹಾಕುವ ಕೆಲಸವನ್ನು ಅರಣ್ಯ ಅಧಿಕಾರಿಗಳು ಮಾಡುವುದು ಬೇಡ. ಸಮಸ್ಯೆಗೆ ತಾರ್ಕಿಕ ಅಂತ್ಯ ಬೇಕೆ ಬೇಕೆಂದು ಒತ್ತಾಯಿಸಿದರು.

ಸಮಿತಿಯ ಪ್ರಮುಖರಾದ ಸಂಕೇತ್ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಸಿಲುಕಿ 41 ಮಂದಿ ಸಾವನ್ನಪ್ಪಿದ್ದರೆ, 103 ಮಂದಿ ಶಾಶ್ವತ ಅಂಗವೈಕಲ್ಯತೆಗೆ ಒಳಗಾಗಿದ್ದಾರೆ. ಪರಿಸ್ಥಿತಿ ಇಷ್ಟು ಗಂಭೀರ ಸ್ವರೂಪದಲ್ಲಿದ್ದರು ಸಿಸಿಎಫ್ ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸುವ ಸಭೆಗೆ ಹಾಜರಾಗುತ್ತಿಲ್ಲ, ಸ್ಪಂದಿಸುತ್ತಿಲ್ಲವೆಂದು ತೀಕ್ಷ್ಣವಾಗಿ ನುಡಿದು, ಇದಕ್ಕೆ ಬದಲಾಗಿ ಕಾಡಾನೆ ದಾಳಿಯಿಂದ ಸಾವು ಸಂಭವಿಸಿದಾಗ ಅರಣ್ಯ ಇಲಾಖೆ 5 ಲಕ್ಷ ಪರಿಹಾರ ನೀಡಿ ಸ್ಥಳದಿಂದ ತೆರಳುತ್ತದಷ್ಟೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನೂತನ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ಈ ಹಂತದಲ್ಲಿ ಖಾಡಾನೆ ಹಾವಳಿ ನಿಯಂತ್ರಣಕ್ಕೆ ಇಲಾಖೆ ಯಾವುದಾದರು ಯೋಜನೆಯನ್ನು ರೂಪಿಸಿ ಸಲ್ಲಿಸಲು ತಯಾರಾಗಿದೆಯೇ ಎಂದು ಪ್ರಶ್ನಿಸಿದರು. ನಿಟ್ಟೂರು ವಿಭಾಗದಲ್ಲಿ ಹುಲಿ ದಾಳಿ ನಿರಂತರವಾಗಿ ನಡೆಯುತ್ತಿದ್ದರು ಅದನ್ನು ಕಾಡಿಗೆ ಅಟ್ಟಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ ಮತ್ತು ಸಿಸಿಎಫ್ ಅವರು ಒಮ್ಮೆಯೂ ಭೇಟಿ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡರಾದ ಪಿ.ಆರ್. ಭರತ್ ಮಾತನಾಡಿ, ಪ್ರಸ್ತುತ ಬಹುತೇಕ ಕಾಡಾನೆಗಳು ತೋಟಗಳಲ್ಲಿದೆಯಾದರೆ, ಇವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಮುನ್ಸೂಚನೆಗಳನ್ನು ನೀಡದೆ ಮಾಡುವ ಮೂಲಕ ತನ್ನ ದರ್ಪ ಪ್ರದರ್ಶಿಸುತ್ತಿದೆ. ಇದು ಬೆಳೆಗಾರರು ಸಂಘರ್ಷಕ್ಕಿಳಿಯಲು ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೋರ್ವ ಕಾರ್ಮಿಕ ನಾಯಕ ಮಹದೇವ್ ಮಾತನಾಡಿ, ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಸಿಸಿಎಫ್ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಅರಣ್ಯ ಭವನಕ್ಕೆ ಬೀಗ ಜಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಮನು ಸೋಮಯ್ಯ ಮಾತನಾಡಿ, ಸಿಸಿಎಫ್ ಅವರ ಧೋರಣೆ ಖಂಡನೀಯವೆಂದರು. ಆನೆ ಹಾವಳಿ ಹೆಚ್ಚಾಗಿರುವ ಸಿದ್ದಾಪುರ ವಿಭಾಗದಲ್ಲಿ ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಬೇಕು ಮತ್ತು ಆನೆ ಹಾವಳಿ ತಡೆಗೆ ಕ್ರಿಯಾ ಯೋಜನೆ ಸಿದ್ಧಪಡಿಸುವುದು ಅಗತ್ಯವೆಂದರು.

ಸಮಿತಿ ಸಂಚಾಲಕರಾದ ಪವೀಣ್ ಬೋಪಣ್ಣ ಮಾತನಾಡಿ ಸಿದ್ದಾಪುರ, ಮಾಲ್ದಾರೆ ಮತ್ತು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ನಿರಂತವಾಗಿ ಉಪಟಳ ನೀಡುತ್ತಿರುವ 15 ಕಾಡಾನೆಗಳನ್ನು ಹಿಡಿಯಲು 15 ದಿನಗಳ ಒಳಗೆ ಹಿಡಿಯಲು ಕಾರ್ಯಾಚರಣೆ ನಡೆಸಬೇಕು. ಇಲ್ಲವಾದಲ್ಲಿ ಇಲಾಖಾ ಕಛೇರಿಯ ಮುಂಭಾಗ ಪ್ರತಿಭಟನೆ, ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಬೆಳೆಗಾರರಾದ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ಕಳೆದ ಮೂರು ದಶಕಗಳಿಂದ ನಾವು ಕಾಡಾನೆ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಂಬಂಧ ನ್ಯಾಯಾಲಯ ಕಾಡಾನೆಗಳನ್ನು ಹಿಡಿಯುವುದು ಕಾಡಾನೆ ಹಾವಳಿಗೆ ತುತ್ತಾಗುತ್ತಿರುವ ಪ್ರದೇಶದ ಬೆಳೆಗಾರರ, ಕಾರ್ಮಿಕರ ಸಭೆಯನ್ನು ನಡೆಸುವಂತೆ ಸೂಚಿಸಿದೆ. ಆದರೆ ಇದು ಯಾವುದೂ ನಡೆದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿ ಕಡಿಮೆಯಾಗುವುದಕ್ಕೆ ಬದಲಾಗಿ ಉಲ್ಬಣಿಸುತ್ತಿದ್ದು, ಕಾಡಾನೆ ಬೆಳೆಗಾರು ಹಾಗೂ ಕಾರ್ಮಿಕರು ನಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಡಿಎಫ್‍ಒ ಮರಿಯಾ ಕ್ರಿಸ್ತ ರಾಜ್, ಬೆಳೆಗಾರರಾದ ಎಂ.ಸಿ. ತಿಮ್ಮಯ್ಯ, ಪಿ.ವಿ.ರೆನ್ನಿ ಕುಟ್ಟ, ಚಂಗಪ್ಪ, ಸತೀಶ್, ರಾಯ್, ಗಪ್ಪಣ್ಣ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News