ಜೂ.18 ರಿಂದ ಲಾರಿ ಮಾಲಕರ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ
ಬೆಂಗಳೂರು, ಮೇ 25: ಪೆಟ್ರೋಲ್, ಡೀಸೆಲ್ ದರ ಏರಿಕೆ, ವಾಹನಗಳ ಥರ್ಡ್ ಪಾರ್ಟಿ (ಮೂರನೆ ವ್ಯಕ್ತಿ) ಪಾಲಿಸಿ ಪ್ರೀಮಿಯಂ ದರ ಹಾಗೂ ಡೀಸೆಲ್ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂ.18 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಆಲ್ ಇಂಡಿಯಾ ಕಾನ್‌ಫೆಡರೇಷನ್ ಆಫ್ ಗೂಡ್ಸ್ ವೆಹಿಕಲ್ ಓನರ್ಸ್ ಅಸೋಸಿಯೇಷನ್ ತೀರ್ಮಾನಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ಚನ್ನಾರೆಡ್ಡಿ, ಕಳೆದ ಐದು ವರ್ಷಗಳಿಂದ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮತ್ತೊಂದು ಕಡೆ ವಾಹನಗಳ ಮೂರನೆ ವ್ಯಕ್ತಿ ಪಾಲಿಸಿ ಪ್ರೀಮಿಯಂ ಅನ್ನು 2002ರಿಂದಲೂ ನಿರಂತರವಾಗಿ ಏರಿಕೆ ಮಾಡಿಕೊಂಡು ಬಂದಿದ್ದು, ಈವರೆಗೆ ಶೇ.1117ರಷ್ಟು ಏರಿಕೆಯಾಗಿದೆ. ಇದನ್ನು ನಿಯಂತ್ರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಶೇ.80ರಷ್ಟು ಲಾರಿ ಮಾಲಕರು ಒಂದು ಅಥವಾ ಎರಡು ವಾಹನಗಳನ್ನು ಹೊಂದಿರುತ್ತಾರೆ. ಬ್ಯಾಂಕ್‌ನಿಂದ ಸಾಲ ಪಡೆದು ವಾಹನಗಳನ್ನು ಖರೀದಿ ಮಾಡಿರುತ್ತಾರೆ. ಬಡ್ಡಿ ಸಮೇತ ಕಂತಿನ ರೂಪದಲ್ಲಿ ಸಾಲ ಮರುಪಾವತಿ ಮಾಡಬೇಕಿದೆ. ಇದರೊಂದಿಗೆ ಮಾಲಕರು ಡೀಸೆಲ್ಗಾಗಿ ಮಾಡುವ ವೆಚ್ಚವನ್ನು ಬಾಡಿಗೆ ರೂಪದಲ್ಲಿ ಪಡೆಯಲಾಗುತ್ತಿಲ್ಲ.
ಪ್ರತಿನಿತ್ಯ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಭರಿಸಬೇಕಾಗುತ್ತದೆ. ಸರಕಾರ ಲಾರಿ ಮಾಲಕರ ಈ ಯಾವ ಸಮಸ್ಯೆಗಳನ್ನೂ ಪರಿಗಣಿಸದೆ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಮೂರನೆ ವ್ಯಕ್ತಿ ಪಾಲಿಸಿ ವಹಿವಾಟನ್ನು ಸರಕಾರ ಮತ್ತು ಖಾಸಗಿ ಕಂಪೆನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಕಂಪೆನಿಗಳಿಗೆ ಪ್ರೀಮಿಯಂ ದರ ನಿಗದಿಪಡಿಸಲು ಅವಕಾಶ ನೀಡಿದ್ದಾರೆ. ಸ್ಪರ್ಧಾತ್ಮಕ ವ್ಯವಹಾರ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಲಾರಿ ಮಾಲಕರು ಸಾಮಾನ್ಯವಾಗಿ ದೊರೆಯುವ ಬಾಡಿಗೆಗಳು ದಿನನಿತ್ಯದ ಬೇಡಿಕೆ ಮತ್ತು ಪೂರೈಕೆ ಆಧಾರದ ಮೇಲೆ ನಿಗದಿಪಡಿಸುತ್ತಾರೆ. ಲಾರಿ ಮಾಲಕರು ಡಿಸೇಲ್ ಖರ್ಚು ಮಾಡುತ್ತಿರುವ ಹಣವನ್ನು ಬಾಡಿಗೆಯಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟಬೇಕಿದೆ ಹಾಗೂ ಅದು ಪ್ರತಿ ವರ್ಷದಿಂದ ವರ್ಷಕ್ಕೆ ಟೋಲ್ ದರ ಏರಿಕೆಯಾಗುತ್ತಿದೆ. ಈ ವೆಚ್ಚಗಳನ್ನು ನಿರ್ವಹಿಸಿಕೊಂಡು, ಲಾರಿಗಳಿಗೆ ಕಟ್ಟಬೇಕಾದ ಮಾಸಿಕ ಕಂತುಗಳ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ.
ಆದುದರಿಂದಾಗಿ ಬಹಳಷ್ಟು ಮಾಲಕರು ಲಾರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಹಲವಾರು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಟ್ಟಿದ್ದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದ ಅವರು, ಜೂ.18 ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅಂದು ರಾತ್ರಿಯಿಂದಲೇ ದೇಶವ್ಯಾಪಿ ಅನಿರ್ದಿಷ್ಟಾವಧಿ ಕಾಲ ಸರಕು-ಸಾಗಣೆ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.