ಗದಗದಲ್ಲಿ ಶಂಕಿತ ನಿಪಾಹ್ ವೈರಸ್ ಪತ್ತೆ: ಹುಬ್ಬಳ್ಳಿಯಲ್ಲಿ ಕಿಮ್ಸ್‌ನಿಂದ ಕಟ್ಟೆಚ್ಚರ
ಹುಬ್ಬಳ್ಳಿ, ಮೇ 25: ಗದಗ ಜಿಲ್ಲೆಯಲ್ಲಿ ಮಾರಕ ಶಂಕಿತ ನಿಪಾಹ್ ವೈರಸ್ ಪತ್ತೆಯಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿವೆ.
ನಗರದ ಕಿಮ್ಸ್ ಆಸ್ಪತ್ರೆಯ ಹಿಂದಿನ ಗೇಟ್‌ನ ಮರದಲ್ಲಿ ಸಾವಿರಾರು ಬಾವಲಿಗಳು ವಾಸವಾಗಿವೆ. ಹೀಗಾಗಿ ಕಿಮ್ಸ್ ಬಳಿಯ ಬಾವಲಿ ಹಾಗೂ ಹಂದಿಗಳ ತೆರವಿಗೆ ಕಿಮ್ಸ್ ನಿರ್ದೇಶಕ ದತ್ತಾತ್ರೇಯ ಬಂಟ್ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.
ನಿಪಾಹ್ ವೈರಸ್‌ನಿಂದ ಹರಡುವ ರೋಗವನ್ನು ಗಂಭೀರವಾಗಿ ಪರಿಗಣಿಸಿರುವ ಕಿಮ್ಸ್ ನಿರ್ದೇಶಕರು, ಅದರಿಂದ ಆಗುವ ಅಪಾಯವನ್ನು ಪಾಲಿಕೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ದಾಖಲಾಗುವ ಶಂಕಿತ ನಿಪಾಹ್ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಘಟಕ ತೆರೆಯಲಾಗಿದೆ. ಚಿಕಿತ್ಸೆಗೆ 40 ಹಾಸಿಗೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗೆ ನಿಪಾಹ್ ವೈರಸ್ ರೋಗಿಗಳ ಲಕ್ಷಣಗಳ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗಿದೆ. ಶಂಕಿತ ನಿಪಾಹ್ ವೈರಸ್ ರೋಗಿಗಳ ನಿಷ್ಕಾಳಜಿ ವಹಿಸದಂತೆ ತಾಕೀತು ಮಾಡಲಾಗಿದೆ.
ನಿಪಾಹ್ ವೈರಸ್ ಹರಡುವಿಕೆ ಮತ್ತು ಅದರ ಗುಣಲಕ್ಷಣಗಳ ಬಗ್ಗೆ ಕಿಮ್ಸ್‌ಗೆ ಬರುವವರಿಗೆ ಜಾಗೃತಿ ನೀಡಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಯ ಹಿಂಬದಿಯ ಗೇಟ್ ಬಳಿ ಸಾವಿರಾರು ಬಾವಲಿಗಳು ವಾಸವಾಗಿರುವುದರಿಂದ ಈ ಭಾಗದಲ್ಲಿ ಸಂಪೂರ್ಣ ಸಂಚಾರ ಮತ್ತು ಸಾರ್ವಜನಿಕ ಓಡಾಟಕ್ಕೆ ನಿಷೇಧ ಹೇರಲು ಕಿಮ್ಸ್ ನಿರ್ಧರಿಸಿದೆ.