ಗಂಗಾವತಿ: ವಿದ್ಯುತ್ ತಂತಿ ತಗುಲಿ ಎರಡು ಕರುಗಳ ಸಾವು
ಗಂಗಾವತಿ, ಮೇ 25: ಸಮೀಪದ ಚಿಕ್ಕಜಂತಕಲ್ ತುಂಗಭದ್ರಾ ನದಿ ದಡದಲ್ಲಿರುವ ದರ್ಗಾದ ಎದುರಿಗೆ ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ತಗುಲಿ ಎರಡು ಕರುಗಳು ಸಾವನ್ನಪ್ಪಿವೆ.
ಗುರುವಾರ ರಾತ್ರಿ ಮಳೆಯಾಗಿದ್ದರಿಂದ ರಾತ್ರಿ ವೇಳೆ ವಿದ್ಯುತ್ ಕಂಬ ಬಿದ್ದಿದ್ದು, ಬೆಳಗಿನ ಜಾವ ಸಾರ್ವಜನಿಕರು ತೆರವುಗೊಳಿಸಿದ್ದಾರೆ. ಈ ಕುರಿತು ಲೈನ್‍ಮನ್‍ಗಳಿಗೆ ತಿಳಿಸಿದರೂ ಸಹ ಕರ್ತವ್ಯದಲ್ಲಿ ಬೆಜವಾಬ್ದಾರಿ ತೋರಿದ್ದಾರೆ ಎನ್ನಲಾಗಿದೆ. ಮದ್ಯಾಹ್ನ 3.30ರ ಸುಮಾರಿಗೆ ಕೆಳಗಡೆ ಬಿದ್ದಿದ್ದ ವಿದ್ಯುತ್ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಮೇಯಲು ಹೋಗಿದ್ದ ಕರುಗಳಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿವೆ. ಚಿಕ್ಕಜಂತಕಲ್ ಗ್ರಾಮದ ವೀರೇಶಪ್ಪ, ಷಣ್ಮುಖಪ್ಪ ಎಂಬುವವರ ಕರುಗಳು ಸಾವನ್ನಪ್ಪಿದ್ದು, ಅಲ್ಲಿದ್ದ ಸಾರ್ವಜನಿಕರು ಜೆಸ್ಕಾಂ ಇಲಾಖೆ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಬಳ್ಳಾರಿ ಜಿಲ್ಲೆಯಿಂದ ಗಂಗಾವತಿಗೆ ತೆರಳುವ ಮುಖ್ಯ ರಸ್ತೆ ಇದಾಗಿದ್ದು, ವಾಹನಗಳ ಓಡಾಟ ಹೆಚ್ಚಾಗಿದೆ. ಅಲ್ಲದೇ ರೈತಾಪಿ ವರ್ಗದವರು ಹೆಚ್ಚಾಗಿ ಹೊಲ ಗದ್ದೆಗಳಿಗೆ ಓಡಾಡುತ್ತಾರೆ. ಈ ಮುಖ್ಯರಸ್ತೆಯಲ್ಲೇ ಮಳೆಗೆ ಬಿದ್ದಿದ್ದ ವಿದ್ಯುತ್ ಕಂಬವನ್ನು ಸಾರ್ವಜನಿಕರೇ ತೆರವು ಗೊಳಿಸಿದ್ದು, ಲೈನ್‍ಮನ್ ಗಳಿಗೂ ತಿಳಿಸಿದರೂ ವಿದ್ಯುತ್ ತಂತಿಯನ್ನು ತೆರವು ಗೊಳಿಸದೇ ಇದ್ದುದರಿಂದ ಈ ಅನಾಹುತಕ್ಕೆ ಕಾರಣ ವಾಗಿದೆ. ಈಗ ಸಾವನ್ನಪ್ಪಿ ರುವ ಕರುಗಳ ರೈತ ಕುಟುಂಬಕ್ಕೆ ಜೆಸ್ಕಾಂ ಇಲಾಖೆ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.