ಅಪ್ಪ-ಮಕ್ಕಳ ವಿರುದ್ಧ ನಮ್ಮ ಹೋರಾಟ: ಯಡಿಯೂರಪ್ಪ

Update: 2018-05-25 14:30 GMT

ಬೆಂಗಳೂರು, ಮೇ 25: ಸಾರ್ವಜನಿಕವಾಗಿ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ವಿರುದ್ಧ ಯಾವುದೆ ಟೀಕೆಗಳನ್ನು ಮಾಡುವುದಿಲ್ಲ. ನಮ್ಮ ಹೋರಾಟವೇನಿದ್ದರೂ ಭ್ರಷ್ಟ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದಿರುವ ಅಪ್ಪ-ಮಕ್ಕಳ ವಿರುದ್ಧ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡನೆ ಮಾಡಿದ ವಿಶ್ವಾಸಯಾಚನೆ ಪ್ರಸ್ತಾವನೆ ಮೇಲೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆಯೂ ಮಾತನಾಡುವುದಿಲ್ಲ. ನಮ್ಮ ಪಕ್ಷದ ಶಾಸಕರು ಯಾರೂ ಕೂಡ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸುವುದಿಲ್ಲ ಎಂದರು.

ನಾಗರ ಹಾವಿನ ದ್ವೇಷಕ್ಕೆ 12 ವರ್ಷ. ಆದರೆ, ಕುಮಾರಸ್ವಾಮಿಯ ರೋಷ ನಾಗರ ಹಾವಿಗಿಂತ ಹೆಚ್ಚು. ದುರ್ಯೋಧನ ಕುಮಾರಸ್ವಾಮಿಯವರ ಮನೆಯ ದೇವರಾಗಿರಬೇಕು. ವಿನಾಶವೇ ದುರ್ಯೋದನನ ಸಂಕಲ್ಪ. ಅದೇ ರೀತಿ ವಿನಾಶಕಾರನ ಬಾಯಲ್ಲಿ ವಿಕಾಸದ ಮಾತು ಕೇಳಿದರೆ, ಕೊಳ್ಳಿದೆವ್ವ ಭಗವದ್ಗೀತೆ ಹೇಳಿದಂತಿದೆ. ತನ್ನನ್ನು ನಂಬಿ ಬಂದವರನ್ನು ಮುಗಿಸುವುದೇ ಕುಮಾರಸ್ವಾಮಿಯ ಗುಣ ಎಂದು ಅವರು ವಾಗ್ದಾಳಿ ನಡೆಸಿದರು.

ನಾನು ಉಪ ಮುಖ್ಯಮಂತ್ರಿಯಾಗಿ ನೀರಾವರಿ ಯೋಜನೆಗಳಿಗೆ ಟೊಂಕಕಟ್ಟಿ ನಿಲ್ಲದೆ ಇದ್ದಿದ್ದರೆ ನಿಮ್ಮ ಬಣ್ಣ ಬಯಲಾಗುತ್ತಿತ್ತು. ತಮ್ಮನ್ನು ಸಾಂದರ್ಭಿಕ ಶಿಶು ಎಂದು ಕರೆದುಕೊಂಡಿದ್ದೀರಾ. ಸಾಂದರ್ಭಿಕ ಶಿಶು ಎಂದರೆ ಬಣ್ಣವನ್ನು ಬದಲಾಯಿಸುವ ಊಸರವಳ್ಳಿ ರೀತಿ ಅಲ್ಲ. ಅದು ಕೇವಲ ಬಣ್ಣ ಬದಲಿಸುತ್ತದೆ, ಆದರೆ, ಇವರು ಹಾಗಲ್ಲ. ಈ ಸರಕಾರಕ್ಕೆ ಹಿಂದಿಲ್ಲ, ಮುಂದಿಲ್ಲ. ಒಂದು ರೀತಿ ದಿನಗೂಲಿ ಸರಕಾರವಿದ್ದಂತೆ ಎಂದು ಯಡಿಯೂರಪ್ಪ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News