ಮೈಸೂರು; ಕೌಟುಂಬಿಕ ಕಲಹ: ಪತ್ನಿ ಹಾಗೂ ಮಗಳನ್ನು ಕೊಂದ ಸಾಫ್ಟ್ ವೇರ್ ಇಂಜಿನಿಯರ್
ಮೈಸೂರು,ಮೇ.25: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ವ್ಯಕ್ತಿಯೋರ್ವರು ಪತ್ನಿ ಹಾಗೂ ಮಗಳ ಕತ್ತು ಕೊಯ್ದು ಭೀಕರ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮೈಸೂರಿನ ವಿಜಯನಗರದ ನಾಲ್ಕನೇ ಹಂತದ ನಿವಾಸಿ, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಪ್ರಜ್ವಲ್ (45) ಎಂಬಾತನೇ ಪತ್ನಿ ಮತ್ತು ಮಗಳನ್ನು ಹತ್ಯೆಗೈದವನಾಗಿದ್ದಾನೆ. ಪತ್ನಿ ಸವಿತ(39)ಹಾಗೂ ಮಗಳು ಸಿಂಚನ (11) ಎಂಬವರನ್ನು ಮೊನ್ನೆ ರಾತ್ರಿಯೇ ಕೊಲೆಗೈದು, ಒಂದು ರಾತ್ರಿ ಮೃತದೇಹಗಳ ಬಳಿ ಕಾಲ ಕಳೆದು ಬಳಿಕ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಡಿಸಿಪಿ ಮತ್ತು ಎಸಿಪಿ ಸಹ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಿನ್ನೆ ವಿವಾಹ ವಾರ್ಷಿಕೋತ್ಸವ ಇತ್ತು ಎನ್ನಲಾಗಿದ್ದು, ಪತಿ ಪತ್ನಿಯರ ಜಗಳ ಮುಗಿಲು ಮುಟ್ಟಿತ್ತು. ವಾರ್ಷಿಕೋತ್ಸವ ಆಚರಿಸುವ ಮುನ್ನಾ ದಿನ ಪ್ರಜ್ವಲ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಜ್ವಲ್ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದು ಬಂದಿದೆ.