×
Ad

ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-05-25 23:27 IST

ಬೆಂಗಳೂರು, ಮೇ 25: ರೈತರ ಸಾಲಮನ್ನಾ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ, ಹಣಕಾಸಿನ ಕುರಿತ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರೈತರ ಸಾಲಮನ್ನಾ ವಿಚಾರವಾಗಿ ಯಡಿಯೂರಪ್ಪನವರಂತೆ ನಾನು ಆತುರದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೆ ಬಂದಿದ್ದರೆ ತಕ್ಷಣವೇ ಸಾಲಮನ್ನಾ ಘೋಷಣೆ ಮಾಡುತ್ತಿದ್ದೆ ಎಂದರು.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದು, ಕಾಂಗ್ರೆಸ್ ಪಕ್ಷದ ನಾಯಕರ ಜೊತೆಯೂ ಚರ್ಚೆ ನಡೆಸಬೇಕು. ರೈತರ ವಿಚಾರದಲ್ಲಿ ನಾನು ಯಾರಿಂದಲೂ ಹೇಳಿಸಿಕೊಳ್ಳಲು ಸಿದ್ಧನಿಲ್ಲ. ಅವರ ಕಷ್ಟವೇನೆಂಬುದು ಸ್ವತಃ ಅರಿತಿದ್ದೇನೆ ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 54 ಗಂಟೆ ಅಧಿಕಾರ ವಹಿಸಿಕೊಂಡಿದ್ದರು. ಅವರೇನು ಮಾಡಿದರೂ, ಅಧಿಕಾರಿಗಳನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಿದರು. ಅದನ್ನೆಲ್ಲ ನೋಡಿದ್ದೇವೆ. ಆದರೆ, ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಜನಪರ ಕೆಲಸ ಮಾಡುತ್ತೇನೆ ಎಂದರು.

ರಾಜಕೀಯವನ್ನು ಇಲ್ಲಿಗೆ ಸಾಕು ಮಾಡಿ, ರಾಜ್ಯದ ಅಭಿವೃದ್ಧಿ ಕಾರ್ಯಕ್ಕೆ ಆಸ್ಥೆ ವಹಿಸೋಣ. ಕಾಂಗ್ರೆಸ್-ಜೆಡಿಎಸ್ ಪ್ರಣಾಳಿಕೆಯಲ್ಲಿನ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ತಾಯಿ ನೊಂದಿದ್ದಾರೆ: ಪತ್ರಿಕೆಯೊಂದರಲ್ಲಿ ನನ್ನ ತಾಯಿ ಚನ್ನಮ್ಮನವರು, ‘ಸಿದ್ದರಾಮಯ್ಯನವರನ್ನು ನಾನು ಯಾವತ್ತು ಕ್ಷಮಿಸೋಲ್ಲ’ ಎಂಬ ಹೇಳಿಕೆ ನೀಡಿದ್ದಾರೆ ಎಂಬುದನ್ನು ಪ್ರಕಟಿಸಿದ್ದಾರೆ. ಆದರೆ, ಅವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಸಿದ್ದರಾಮಯ್ಯನವರನ್ನು ಕ್ಷಮಿಸಲು ನಾನ್ಯಾರು ಎಂದು ಅವರು ಹೇಳಿದ್ದಾರೆ. ಇದರಿಂದ ನನ್ನ ತಾಯಿ ನೊಂದಿದ್ದಾರೆ ಎಂದು ಎಚ್‌ಡಿಕೆ ನುಡಿದರು.

‘ಎಲ್ಲ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ. ರಾಜಕಾರಣ ಮಾಡಬೇಡಿ ಅಂತ ಮಾತ್ರ ಕೆಲ ಸ್ವಾಮೀಜಿಗಳಿಗೆ ಹೇಳಿದ್ದೇನೆ. ಸಣ್ಣ-ಪುಟ್ಟ ಸ್ವಾಮೀಜಿಗಳನ್ನು ನಾನು ಗೌರವಿಸುತ್ತೇನೆ. ಸ್ವಾಮೀಜಿಗಳು ಧರ್ಮದ ರಕ್ಷಕರು. ಅವರ ಮೇಲೆ ನನಗೆ ಅಪಾರ ಗೌರವವಿದೆ. ಯಾವುದೇ ಸ್ವಾಮೀಜಿಯ ಪತ್ರ ನನಗೆ ಬಂದಿಲ್ಲ. ನಾನು ಯಾರನ್ನು ಲಘುವಾಗಿ ಪರಿಗಣಿಸಿಲ್ಲ. ನಮ್ಮನ್ನು, ನಮ್ಮ ಸರಕಾರವನ್ನು ಲಘುವಾಗಿ ಪರಿಗಣಿಸಬೇಡಿ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ, ನನ್ನ ತಪ್ಪಿದ್ದರೆ ಕ್ಷೇಮ ಕೇಳಲು ಸಿದ್ಧ’
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News