ಮಂಡ್ಯ: 5 ದಿನಗಳ ಮಾವು ಮೇಳಕ್ಕೆ ಚಾಲನೆ

Update: 2018-05-25 18:25 GMT

ಮಂಡ್ಯ, ಮೇ 25: ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ತೋಟಗಾರಿಕೆ ಕಛೇರಿ ಆವರಣದಲ್ಲಿ 5 ದಿನಗಳ ಕಾಲ ನೆಡೆಯುವ  ಮಾವು ಮೇಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಚಾಲನೆ ನೀಡಿದರು.

ಮಾವಿನ ಹಣ್ಣು ಸವಿಯುವ ಮೂಲಕ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಮಂಜುಶ್ರೀ,  ರಾಜ್ಯಗಳ ವಿವಿಧ ಜಿಲ್ಲೆಗಳ ಮಾವು ತಳಿಗಳ ಜೊತೆಯಲ್ಲಿ ಬೇರೆ ರಾಜ್ಯದ  ಮಾವುಗಳನ್ನು ಕೂಡ ಈ ಮೇಳದಲ್ಲಿ ಕಾಣಬಹುದಾಗಿದೆ.  ಸೀಜನಲ್ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದರ ಮೂಲಕ ಮಾವು ಬೆಳಗಾರರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ನಿಪಾಹ್ ವೈರಸ್ ಬಗ್ಗೆ ಎಲ್ಲಾ ರೀತಿಯ ಮುಂಜಾಗೃತ  ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅತಂಕವಿಲ್ಲದೆ  ಜನತೆ ಮಾವು ಸೇವನೆ ಮಾಡಬಹುದಾಗಿದೆ. ಇಲ್ಲಿರುವ ಮಾವವುಗಳನ್ನು ಮಾಗಿಸದೆ   ನೈಸರ್ಗಿಕವಾಗಿ ಮಾಗಿಸಲಾಗಿದೆ. ಕೃತಕವಾಗಿ ಮಾಗಿಸಿ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಆರೋಗ್ಯ  ಇಲಾಖೆ ಮತ್ತು ಪಶು ಇಲಾಖೆಗಳ ಜತೆ ಸಭೆ ನಡೆಸಿ ನಿಪಾಹ್ ವೈರಸ್ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸೂಚನೆ ನೀಡಿಲಾಗಿದೆ. ಗ್ರಾಮ ಪಂಚಾಯತ್‍ಮಟ್ಟದಲ್ಲೂ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ, ಗೊಂದಲವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ.ಎಸ್.ರಾಜು, ಹಿರಿಯ ಸಹಾಯಕ ನಿರ್ದೇಶಕಿ  ಕೆ.ಎಂರೇಖಾ ಹಾಗೂ   ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

18 ಮಾವಿನ ಸ್ಟಾಲ್‍ಗಳಲ್ಲಿ ಆಂಧ್ರಪ್ರದೇಶದ 10 ಮಾವಿನ ತಳಿ, ಬೆಳಗಾವಿ ಜಿಲ್ಲೆಯ 30 ತಳಿಗಳನ್ನೊಳಗೊಂಡಂತೆ ಒಟ್ಟು 73 ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನವೇ ಮಾವಿನ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News