ಮಂಡ್ಯ : ತೂತುಕುಡಿ ಗೋಲಿಬಾರ್ ವಿರುದ್ಧ ರೈತರ ರಸ್ತೆತಡೆ
ಮಂಡ್ಯ, ಮೇ 25: ತಮಿಳುನಾಡಿನ ತೂತುಕುಡಿಯಲ್ಲಿ ಪರಿಸರಕ್ಕೆ ಮಾರಕವಾಗಿರುವ ಸ್ಟರ್ಲೈಟ್ ತಾಮ್ರ ಸಂಸ್ಕರಣಾ ಘಟಕ ವಿರೋಧಿಸಿ ಚಳುವಳಿ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿ ರೈತಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ಶುಕ್ರವಾರ ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಲ್ಲಿ ರಸ್ತೆತಡೆ ನಡೆಸಿದರು.
ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ರೈತಸಂಘದ ಕಾರ್ಯಕರ್ತರು, ಶಾಂತ ರೀತಿಯಲ್ಲಿ ಚಳವಳಿ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿ 11 ರೈತರ ಸಾವಿಗೆ ಅಲ್ಲಿನ ಸರಕಾರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಲಿಬಾರ್‍ನಲ್ಲಿ ಮೃತಪಟ್ಟವರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಕೃತ್ಯಕ್ಕೆ ಕಾರಣರಾದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು. ತಾಮ್ರ ಘಟಕವನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ರಾಜ್ಯದ ರೈತರ ಎಲ್ಲಾ ಬ್ಯಾಂಕುಗಳ ಸಾಲಮನ್ನಾ ಮಾಡಬೇಕೆಂದು ಈ ಸಂದರ್ಭದಲ್ಲಿ ರೈತರು ಒತ್ತಾಯಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ರೈತರ ಸಹಕಾರ ಸಂಘ ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿನ ಸಂಪೂರ್ಣ ಸಾಲ ಮನ್ನಾಮಾಡುವುದಾಗಿ ಘೋಷಿಸಿದ್ದ ಎಚ್.ಡಿ.ಕುಮಾರಸ್ವಾಮಿ, ಈಗ ಸಾಲಮನ್ನಾ ವಿಚಾರವಾಗಿ ಫಲಾಯನವಾದ ಹೇಳಿಕೆಗಳನ್ನು ನೀಡುತ್ತಾ ರೈತಸಮುದಾಯಕ್ಕೆ ವಂಚಿಸುತ್ತಿದ್ದಾರೆಂದು ಅವರು ಆರೋಪಿಸಿದರು.
ಪ್ರಸಕ್ತ ವರ್ಷದಲ್ಲಿ ಮುಂಗಾರು ಅವಧಿಗೆ ಮುಂಚೆಯೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಹಳೆಯ ಸಾಲಗಳನ್ನು ಸಂಪೂರ್ಣ ಮನ್ನಾಮಾಡಿ ರೈತರು ಬೆಳೆ ಒಡ್ಡಲು ಹೊಸಸಾಲ ನೀಡಬೇಕು ಮತ್ತು ಅಗತ್ಯ ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ರೈತರ ಸಾಲ ಸಂಪೂರ್ಣ ಮನ್ನಾ ಮಾಡದಿದ್ದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರದ ವಿರುದ್ದ ರಾಜ್ಯಾದ್ಯಂತ ರೈತರು ಬೀದಿಗಿಳಿದು ಹೋರಾಟಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರೈತಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಕಾರ್ಯದರ್ಶಿ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ, ಮುಖಂಡರಾದ ದಿನೇಶ್ ದೊಡ್ಡಪಾಳ್ಯ, ರಾಮೇಗೌಡ, ಮಠದದೊಡ್ಡಿ ಕೆಂಪೇಗೌಡ, ಕ್ಯಾತಘಟ್ಟದ ಸತೀಶ್, ದೇವರಹಳ್ಳಿ ಅನಂತ್, ನಗರಕೆರೆ ಶ್ರೀಧರ್, ಪ್ರಭುಲಿಂಗು, ಡಿ.ಕೆ.ರಮೇಶ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.