ದಿನೇದಿನೇ ಬಹುತ್ವ ಕಳೆದುಕೊಳ್ಳುತ್ತಾ ಹಿಂದುತ್ವದೆಡೆಗೆ ಸಾಗುತ್ತಿರುವ ಭಾರತ: ತೆಲುಗು ಬರಹಗಾರ್ತಿ ಓಲ್ಗಾ ಆತಂಕ

Update: 2018-05-26 14:48 GMT

ಧಾರವಾಡ, ಮೇ 26: ದೇಶದ ಜನರಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಉದ್ದೀಪನಗೊಳಿಸಿ, ಅದರ ಮೌಲ್ಯಗಳನ್ನು ಬೆಳೆಸುವ ಮೂಲಕ ಮಾತ್ರ ಇಂದು ಪ್ರಜಾಪ್ರಭುತ್ವವನ್ನು ಉಳಿಸಲು ಸಾಧ್ಯವಿದೆ. ಈ ಕಾರ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಸಾಹಿತ್ಯವು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಪ್ರಸಿದ್ಧ ತೆಲುಗು ಬರಹಗಾರ್ತಿ ಓಲ್ಗಾ (ಪಿ ಲಲಿತ ಕುಮಾರಿ) ಹೇಳಿದರು.

ಧಾರವಾಡದ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ಮೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡುತ್ತಾ ‘ಬಹುತ್ವ ಭಾರತ- ಇಂದು ನಾಳೆ’ ಎಂಬ ವಿಷಯದ ಕುರಿತಾಗಿ ಅವರು ಮಾತನಾಡಿದರು.

ಭಾರತದ ನಿಜವಾದ ಸತ್ವ ಇರುವುದೇ ಬಹುತ್ವದಲ್ಲಿ. ಆದರೆ ದುರದೃಷ್ಟವಶಾತ್ ಇಂದು ದೇಶವು ಬಹುತ್ವವನ್ನು ದಿನೇದಿನೇ ಕಳೆದುಕೊಳ್ಳುತ್ತಾ ಹಿಂದುತ್ವ ಭಾರತದೆಡೆಗೆ ಸಾಗುತ್ತಿರುವುದು ಆತಂಕದ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಬಹುತ್ವ ಭಾರತವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ತುರ್ತು ಬಂದೊದಗಿದೆ ಎಂದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಚಾಲ್ತಿಗೆ ಬಂದ ‘ನೇಷನ್’ ಮತ್ತು ‘ನ್ಯಾಷನಲಿಸಂ’ ಎಂಬ ಪದಗಳು ಪ್ರಜಾಪ್ರಭುತ್ವದ ಮೌಲ್ಯದೊಂದಿಗೆ ಸಂಬಂಧ ಹೊಂದಿದ್ದವು. ಆದರೆ ಸ್ವಾತಂತ್ರ್ಯಾ ನಂತರದ ಈ ಏಳು ದಶಕಗಳಲ್ಲಿ ಈ ಎರಡೂ ಪದಗಳು ಪ್ರಜಾಪ್ರಭುತ್ವದೊಂದಿಗಿನ ಸಂಬಂಧ ಕಡಿದುಕೊಂಡು ಬಹುತ್ವದ ಮೇಲೆ ದಾಳಿ ನಡೆಸುವ ಪರಿಕಲ್ಪನೆಗಳಾಗಿ ಬದಲಾಗಿವೆ. ಇಂದಿನ ರಾಷ್ಟ್ರೀಯವಾದದ ಪರಿಕಲ್ಪನೆಯು ಅಲ್ಪಸಂಖ್ಯಾತರಲ್ಲಿ ಹಾಗೂ ಬಹುಸಂಖ್ಯಾತರಲ್ಲಿ ಆತಂಕ ಸೃಷ್ಟಿಸುತ್ತಾ, ನರೇಂದ್ರ ಮೋದಿ, ಅಮಿತ್ ಷಾ ರಂತಹ, ಜನರೊಂದಿಗೆ ಸಂವಾದಿಸಲು ಬಯಸದ, ಆದರೆ ತಮ್ಮ ವಿಚಾರಗಳನ್ನಷ್ಟೇ ಜನರ ಮೇಲೆ ಹೇರುವ, ಪುಕ್ಕಲು ಅಸಹಿಷ್ಣು ವ್ಯಕ್ತಿಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಸಾಹಿತ್ಯಕ್ಕೂ ಸಂವಿಧಾನಕ್ಕೂ ಇರುವ ಸಂಬಂಧವನ್ನು ನಾವು ಗ್ರಹಿಸಬೇಕಿದೆ. ಸಂವಿಧಾನವು ತನ್ನ ಮೂಲಭೂತ ಹಕ್ಕುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಈ ಹಕ್ಕಿಗೆ ಕುತ್ತು ಬಂದಿರುವ ಹೊತ್ತಿನಲ್ಲಿ ಇದನ್ನು ಉಳಿಸುಕೊಳ್ಳುವ ಹೋರಾಟದ ಮೂಲಕವೇ ಸಾಹಿತ್ಯ ಹಾಗೂ ಸಂವಿಧಾನದ ಸಂಬಂಧ ಗಟ್ಟಿಗೊಳ್ಳಬೇಕಿದೆ. ಇಂದಿನ ಸಂದರ್ಭದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಲು ಕೆಲಸ ಮಾಡುವುದು ಸಾಹಿತ್ಯ ರಚನೆಕಾರರ ಕರ್ತವ್ಯವಾಗಿದೆ ಎಂದರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಜಾರಿಗೊಂಡ ಸಂದರ್ಭದಲ್ಲಿ ಸಂವಿಧಾನದ ನೈತಿಕತೆಯನ್ನು ಜನಮಾನಸದಲ್ಲಿ ಬೆಳೆಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದ್ದರು. ಇದು ನಮ್ಮ ದೇಶದಲ್ಲಿ ಸ್ವಭಾವ ಸಹಜವಾಗಿರುವ ಮೌಲ್ಯವಾಗಿಲ್ಲವಾದ್ದರಿಂದ ಸರ್ಕಾರ ನಡೆಸುವವರು ಪ್ರಜ್ಞಾಪೂರ್ವಕವಾಗಿ ಸಾಂವಿಧಾನಿಕ ನೈತಿಕತೆಯನ್ನು ಪ್ರೇರೇಪಿಸಬೇಕು ಎಂದು ಅಂಬೇಡ್ಕರ್ ತಿಳಿಹೇಳಿದ್ದರು. ಆದರೆ ಇಷ್ಟು ವರ್ಷಗಳಲ್ಲಿ ನಮ್ಮನ್ನಾಳಿದ ಯಾವುದೇ ಸರ್ಕಾರವೂ ಈ ನಿಟ್ಟನಲ್ಲಿ ಒಂದೇ ಒಂದು ಕಾರ್ಯಕ್ರಮ ಹಾಕಿಕೊಂಡಿಲ್ಲದಿರುವುದು ವಿಷಾದನೀಯ ಎಂದು ಓಲ್ಗಾ ತಮ್ಮ ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಅವರು ಈ ಜವಾಬ್ದಾರಿ ಸಾಹಿತಿ ಬರಹಗಾರರ ಮೇಲಿರುವುದರ ಬಗ್ಗೆ ಎಚ್ಚರಿಸಿದರು. ಮನುಷ್ಯರಾದವರು ಸಹ ಮನುಷ್ಯರನ್ನು ಅರ್ಥ ಮಾಡಿಕೊಳ್ಳುತ್ತಾರೆ. ಇದಕ್ಕೆ ಅನುಕಂಪವಿರುವ ಹೃದಯವಿದ್ದರೆ ಸಾಕು. ಸಾಹಿತ್ಯವು ಒಬ್ಬ ಕಳ್ಳನಾದವನ ಬಗ್ಗೆಯೂ ಅನುಕಂಪ ಸೃಷ್ಟಿಸಬಲ್ಲದು. ಕಳ್ಳತನಕ್ಕೆ ಬಡತನವು ಕಾರಣವಾಗಿರುತ್ತದೆ, ಬಡತನವು ಸಾಮಾಜಿಕ ಆಯಾಮ ಹೊಂದಿರುತ್ತದೆ ಎಂಬುದನ್ನು ಸಾಹಿತ್ಯ ತಿಳಿಸಿಕೊಡಬಲ್ಲದು. ಮೌಲ್ಯಗಳು ಸಾಹಿತ್ಯದ ಮೂಲಕ ಭಾವ ಚೈತನ್ಯವಾಗಿ, ಅದು ತದನಂತರದಲ್ಲಿ ರಾಜಕೀಯ ಪ್ರಜ್ಞೆಯಾಗಿ ಬೆಳೆಯಲು ಸಾಧ್ಯವಿದೆ. ಕಾನೂನಿಗೊಳಪಡುವ ವ್ಯಕ್ತಿಗಳ ಸಂಕಟಗಳನ್ನು ಸಾಹಿತ್ಯ ಮಾಡಿದಾಗ ಇದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಸಾಹಿತ್ಯದ ಹಬ್ಬಗಳು ಪ್ರೇರಣೆ ನೀಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ ಚಿಂತಕ, ಬರಹಗಾರ ಕೆ.ಪಿ.ಸುರೇಶ್ ಅವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಮೇ ಸಾಹಿತ್ಯ ಸಮ್ಮೇಳನವು ನಾಡಿನ ಹಲವು ಚಳವಳಿಗಳಿಗೆ ಪೂರಕ ಪ್ರೇರಕವಾಗಿದೆ ಎಂದರಲ್ಲದೆ, ಈ ಸಲದ ಸಮ್ಮೇಳನದ ‘ಥೀಮ್’ ಆಗಿರುವ ಬಹುತ್ವ ಭಾರತ ಎನ್ನುವುದು ಮುಂದಿನ ಒಂದು ವರ್ಷ ಪ್ರತಿಯೊಬ್ಬರಿಗೂ ಕ್ರಿಯೆಗೆ ದಿಕ್ಸೂಚಿಯಾದಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದರು.

ಶೈಕ್ಷಣಿಕ, ಸಾರ್ವಜನಿಕ ರಂಗದ ಬಿರುಕುಗಳಲ್ಲಿ ಫ್ಯಾಸಿಸ್ಟ್ ವಿಚಾರಗಳು ತೂರಿಕೊಳ್ಳುತ್ತಿವೆ. ಭೂತಾರಾಧನೆಯಂತಹ ಕರಾವಳಿಯ ವಿಶಿಷ್ಟ ಸಾಂಸ್ಕೃತಿಕ ಆಚರಣೆಯಲ್ಲಿ ಬ್ರಹ್ಮ ಕಲಶದಂತಹ ಬ್ರಾಹ್ಮಣೀಯ ಆಚರಣೆಯನ್ನು ತೂರಿಸಬೇಕೆನ್ನುವ ಮಾತುಗಳನ್ನು ವೈದಿಕ ಸಂಸ್ಕೃತಿಯ ವಕ್ತಾರರು ಆಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಬಹುತ್ವದ ಪರಂಪರೆಯನ್ನು ಗುರುತಿಸಿ ಉಳಿಸಿಕೊಂಡು ಮುನ್ನೆಲೆಗೆ ತರಬೇಕಿರುವು ತುರ್ತು ಇಂದು ಎದುರಾಗಿದೆ ಎಂದವರು ಹೇಳಿದರು.

ಉದ್ಘಾಟನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿಕೊಂಡಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟೀಸ್ ನಾಗಮೋಹನ್‍ದಾಸ್ ಮಾತನಾಡಿ, ನಮ್ಮದು ಬಹಳ ದೊಡ್ಡ ದೇಶ. ಇದಕ್ಕೆ ಬಹಳ ದೊಡ್ಡ ಇತಿಹಾಸವೂ ಇದೆ. ಈ ದೇಶಕ್ಕೆ ಆಹಾರ, ವ್ಯಾಪಾರ ಮತ್ತು ಫಲವತ್ತಾದ ಭೂಮಿ ಇದೆ, ಕಲೆ ಸಂಸ್ಕೃತಿಯಿದೆ ಎಂದು ವಿದೇಶಿಗರು ಬಂದರು. ವಿಶ್ವವಿದ್ಯಾಲಗಳಿವೆ ಎಂದು ಜ್ಞಾನಾರ್ಜೆನೆಗಾಗಿ ಬಂದರು, ಲೂಟಿ ಮಾಡಲೂ ಸಹ ಬಹಳಷ್ಟು ವಿದೇಶಿಗರು ಬೇರೆ ಬೇರೆ ಸಂಸ್ಕೃತಿಯ ಬೇರೆ ಭಾಷ ಕುಟುಂಬಗಳಿಂದ ಜನ ನಮ್ಮ ದೇಶಕ್ಕೆ ಬಂದರು. ಅದರಲ್ಲಿ ಬಹುಪಾಲು ಜನ ಇಲ್ಲಿಯೇ ಉಳಿದರು. ಅವರು ಬೇರೆ ಬೇರೆ ಆಗಿ ಬದುಕಲಿಲ್ಲ. ಒಂದೇ ಕಡೆ ಬದುಕಿದರು ಮತ್ತು ಪ್ರತ್ಯೇಕವಾಗಿ ಉಳಿದಿಲ್ಲ. ಹಲವಾರು ಸಂಕರಗಳು ಆಗಿವೆ. ಎಷ್ಟಾಗಿದೆ ಎಂದರೆ ನಮ್ಮ ದೇಶದಲ್ಲಿ ಪ್ಯೂರ್ ರೇಸ್ ಅನ್ನುವುದೇ ಇಲ್ಲ. ಇದು ಈ ದೇಶದ ಗುಣ. ಈ ದೇಶದಲ್ಲಿ 4,600 ಜಾತಿಗಳಿವೆ. ಇಸ್ಲಾಂ ಭಾರತವನ್ನು ಬಿಟ್ಟು ಬೇರೆ ಕಡೆ ಎರಡೇ ಜಾತಿಗಳಿದ್ದರೆ ಇಲ್ಲಿ 200 ಇವೆ. ಮತ್ತು ಕ್ರೈಸ್ತರು ಹೊರಗಡೆ 2 ಇದ್ದರೆ ನಮ್ಮ ದೇಶದಲ್ಲಿ 400 ಇವೆ. ನೂರಾರು ಭಾಷೆಗಳು ಆನೇಕ ಧರ್ಮ, ಸಂಸ್ಕೃತಿಗಳಿದೆ. ಇವರೆಲ್ಲ ಶಾಂತಿಯಿಂದ ಸೌಹಾರ್ದದಿಂದ ಬದುಕುತ್ತಿದ್ದರು. ಇದೇ ಬಹುತ್ವದ ಸಂಕೇತ ಎಂದರು.

ನಮ್ಮ ಸಂಸ್ಕೃತಿ, ಆಹಾರ, ಉಡುಪು, ಸಂಪ್ರದಾಯ, ಭಾಷೆ ಎಲ್ಲವೂ ಬದಲಾಗುತ್ತಲೇ ಇರುತ್ತದೆ. ಇದು ಪ್ರಜಾಪ್ರಭುತ್ವದ ದೇಶ ಕಲಿಸುತ್ತದೆ. ಇದರಿಂದಲೇ ಬಹುತ್ವದ ದೇಶದಲ್ಲಿ ಕಷ್ಟ ಸುಖ, ಹೋರಾಟಗಳಲ್ಲಿ ಒಬ್ಬರಿಗೊಬ್ಬರ ಹೆಗಲಿಗೆ ಹೆಗಲಾಗಿ ಸಹಾಯ ಮಾಡಿದ್ದಾರೆ. ನಮ್ಮ ದೇಶದ ಸ್ವತಂತ್ರ ಹೋರಾಟ ಬೇರೆ ದೇಶದ ರೀತಿ ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ. ರಾಜಕೀಯ ಹೋರಾಟದ ಜೊತೆ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟವಾಗಿರುವುದು ಒಂದು ವಿಶೇಷವಾಗಿದೆ. ಸ್ವಾತಂತ್ರ್ಯ ಬಂದಾಗ ಹಲವಾರು ಪ್ರಶ್ನೆಗಳು ಬಂದವು. ಇದು ಹಿಂದೂ ರಾಷ್ಟ್ರವಾಗಬೇಕ ಅನ್ನುವುದು, ಆದರೆ ಇದನ್ನು ಹಾಗೆ ಮಾಡೆಲು ಬಿಡದೆ ಇದು ಒಂದು ಧರ್ಮದ ಹೋರಾಟವಲ್ಲ. ಹಾಗಾಗಿ ಇದು ಜಾತ್ಯಾತೀತ ರಾಷ್ಟ್ರವಾಗಬೇಕು ಎಂದು ಈ ದೇಶ ಕಟ್ಟಲಾಗಿದೆ. ಕೇವಲ ಮೆರಿಟ್ ಮೇಲೆ ಈ ದೇಶ ನಿರ್ಮಿಸಲು ಸಾಧ್ಯವಿಲ್ಲ ಎಂದು ಸಮಾಜಿಕ ನ್ಯಾಯದ ರಾಷ್ಟ್ರವನ್ನಾಗಿ ನಿರ್ಮಿಸಲಾಯಿತು. ಮತ್ತು ಈ ದೇಶವನ್ನು ಗಣರಾಜ್ಯವನ್ನಾಗಿ ಮಾಡಲಾಯಿತು. ಎಲ್ಲಾ ಸ್ವತಂತ್ರ ದೇಶವು ಗಣರಾಜ್ಯವಲ್ಲ ಆದರೆ ಎಲ್ಲಾ ಗಣರಾಜ್ಯ ದೇಶವು ಸ್ವತಂತ್ರ ದೇಶವು. ಸಂವಿಧಾನದಲ್ಲಿ 51 (ಎ) ಅನುಚ್ಛೇದದಲ್ಲಿ ಬಹುತ್ವವನ್ನು ಕಾಪಾಡುವುದು ಮೂಲಭುತ ಕರ್ತವ್ಯ ಎಂದು ಹೇಳುತ್ತದೆ. ಮತ್ತು ಸರ್ಕಾರಕ್ಕೆ ಒಂದು ಧರ್ಮ ಇರಬಾರದು ಮತ್ತು ಧರ್ಮ ಜಾತಿಯ ಹೆಸರಿನಲ್ಲಿ ತಾರತಮ್ಯ ಮಾಡಬಾರದು. ಈ ದೇಶವು ಎಂದೂ ಒಂದು ರಾಜಕೀಯ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಆದರೆ ಈಗ ಒಂದು ದೇಶ, ಬಾವುಟ, ಒಂದು ರಾಷ್ಟ್ರಗೀತೆಯನ್ನು ಬಹುತ್ವದ ಉಳಿಸಿಕೊಂಡೇ ಒಂದಾಗಿದೆ. ಇದು ಸ್ವಾತಂತ್ರ ನಂತರದಲ್ಲಿ ಈ ದೇಶದ  ಒಂದು ಸಾಧನೆ.

ಇದೆಲ್ಲೆವೂ ಸಂವಿಧಾನದಿಂದ ಸಾಧ್ಯವಾಗಿದೆ. ಹಾಗಾಗಿ ನಾವು ಈ ಸಂವಿಧಾನವನ್ನು ಉಳಿಸಿಕೊಳ್ಳಬೇಕು. ಉಳಿಸಿಕೊಳ್ಳಬೇಕು ಎಂದರೆ ಹೇಗೆ? ಇದಕ್ಕೆ ಹಲವಾರು ಸವಾಲುಗಳಿವೆ. ನಾವು ಮುಕ್ತ ಮನಸ್ಸಿನಿಂದ, ಧೈರ್ಯವಾಗಿ ಮಾತನಾಡಬೇಕು. ಪಾರ್ಲಿಮೆಂಟರಿ ರಾಜಕೀಯಕ್ಕೆ ಹೊರತಾಗಿ ನಾವು ಪರ್ಯಾಯ ರಾಜಕೀಯದ ಬಗ್ಗೆ ಚರ್ಚೆ ಶುರುವಾಗಬೇಕು. ಈಗ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಪರ, ಆತ್ಮಹತ್ಯೆ ಮಾಡಿಕೊಂಡ ರೈತರ ಪರ, ಶೊಷಿತರ ಪರ ಮಾತನಾಡುವವರು ಪಾರ್ಲಿಮೆಂಟ್ ನಲ್ಲಿ ಯಾರು ಇಲ್ಲ. ಅಂಬೇಡ್ಕರ್ ಅಂದೇ ಹೇಳಿದ್ದರು ಸಂವಿಧಾನ ಎಷ್ಟೇ ಅದ್ಭುತವಾಗಿದ್ದರೂ ಅದನ್ನು ಜಾರಿ ಮಾಡುವವರು ಒಳ್ಳೆಯವರು ಇಲ್ಲದಿದ್ದರೆ ಸಂವಿಧಾನವೂ ಕೂಡ ಕೆಟ್ಟ ಸಂವಿಧಾನ ಆಗಬಹುದು. ಸಂವಿಧಾನ ಬದಲು ಮಾಡ್ತೀವಿ, ವಿಮರ್ಶೆ ಮಾಡ್ತೀವಿ, ಮೀಸಲಾತಿ ಬೇಡ, ಸಂವಿಧಾನ ತಿದ್ದುಪಡಿ ಮಾಡಿ ಜಿ.ಎಸ್.ಟಿ ತರುತ್ತಾರೆ. ನೋಟ್ ಬ್ಯಾನ್ ಅನ್ನು ಮಾಡಿ ರಿಸರ್ವ್ ಬ್ಯಾಂಕ್ ನ ಕೆಲಸವನ್ನು ಕೆಳಗೆ ಇಳಿಸಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ನಿಮಗೆ ಗೊತ್ತಾಗಬೇಕು ಅಪಾಯ ಎಲ್ಲಿದೆ ಎಂದು. ಇದೆಲ್ಲವನ್ನು ನೋಡುತ್ತಿದ್ದರೆ ನಮ್ಮ ದೇಶವು ಅಪಾಯದಲ್ಲಿದೆ ಎಂದು ತಿಳಿಯುತ್ತದೆ. ಅದಕ್ಕಾಗಿ ನಮಗೆಲ್ಲ ಒಂದು ಜವಾಬ್ದಾರಿಯಿದೆ ನನಗೂ ಇದೆ ಆದ್ದರಿಂದ ಇಲ್ಲಿಗೆ ಬಂದಿದ್ದೇನೆ. ನಾವು ಸೂರ್ಯನಂತೆ ಪ್ರಕಾಶಿಸಲು ಸಾಧ್ಯವಿಲ್ಲದೆ ಇದ್ದರೂ ಮಿಣುಕು ಹುಳುವಾಗಿ ಕೆಲಸ ಮಾಡಲು ಸಾಧ್ಯವಿದೆ ಮತ್ತು ಅಂತಹ ಕೆಲಸವಾದರೂ ಮಾಡೋಣ ಎಂದು ಹೇಳಿದರು.

ವೇದಿಕೆಯಲ್ಲಿ ಎಸ್.ಎಸ್.ಹರ್ಲಾಪುರ, ಡಾ.ಶೇಖರ್ ಲದ್ವಾ, ಡಾ.ಡಿ.ಬಿ.ಗವಾನಿ, ಡಾ.ಅನಸೂಯಾ ಕಾಂಬಳೆ, ಪ್ರಕಾಶ್ ಉಡಿಕೇರಿ ಹಾಜರಿದ್ದರು. ಡಾ. ಸಂಜೀವ ಕುಲಕರ್ಣಿ ಕಾರ್ಯಕ್ರಮ ಸಂಯೋಜನೆ ನಡೆಸಿದರು.

ವರದಿ: ಹರ್ಷಕುಮಾರ್ ಕುಗ್ವೆ

ಫೋಟೋಗಳು: ಐವನ್ ಡಿಸಿಲ್ವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News