ಹಾಸನ: 5ನೇ ದಿನಕ್ಕೆ ಕಾಲಿಟ್ಟ ಗ್ರಾಮೀಣ ಅಂಚೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ

Update: 2018-05-26 12:28 GMT

ಹಾಸನ,ಮೇ.26: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ನಗರದ ಹಳೆ ಬಸ್‍ನಿಲ್ದಾಣ ರಸ್ತೆ ಬಳಿ ಇರುವ ಮುಖ್ಯ ಅಂಚೆ ಕಛೇರಿ ಮುಂದೆ ನಡೆಸಲಾಗುತ್ತಿರುವ ಅನಿರ್ಧಿಷ್ಟವಧಿ ಮುಷ್ಕರ 5ನೇ ದಿನಕ್ಕೆ ಮುಂದುವರೆದಿದ್ದು, ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಸಲಾಯಿತು.

ಅತೀ ಶೀಘ್ರದಲ್ಲಿ ಕಮಲೇಶ್ ಕಮಿಟಿ ವರದಿ ಜಾರಿ ಮಾಡುವ ಮೂಲಕ ನ್ಯಾಯಯುತವಾದ ಬೇಡಿಕೆ ಈಡೇರಬೇಕು. ಹೆಚ್ಚಿನ ಅವಧಿ ಕೆಲಸ ಮಾಡುವುದನ್ನು ನಿಲ್ಲಿಸಿ 8 ಗಂಟೆಯ ಕೆಲಸ ಮತ್ತು ಇರುವ ನೌಕರರನ್ನೇ ಖಾಯಂಗೊಳಿಸಬೇಕು. ದೆಹಲಿ ಮತ್ತು ಮದ್ರಾಸ್ ಕೇಂದ್ರ ನ್ಯಾಯಾಲಯಗಳ (ಸಿಎಟಿ) ತೀರ್ಮಾನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಟಾರ್ಗೇಟ್ ಹೆಸರಿನಲ್ಲಿ ಜಿಡಿಎಸ್ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಕ್ಷಣದಲ್ಲಿ ನಿಲ್ಲಿಸುವಂತೆ ಮುಷ್ಕರ ನಿರತರು ಆಗ್ರಹಿಸಿದರು.

ಹಾಸನ ವಿಭಾಗದಲ್ಲಿ ಒಟ್ಟು 600 ರಿಂದ 700 ಜನ ಗ್ರಾಮೀಣ ಅಂಚೆ ನೌಕರರು ಅನಿರ್ಧಿಷ್ಟವಧಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರಕಾರ ಮತ್ತು ಅಂಚೆ ಇಲಾಖೆ ಈ ತಕ್ಷಣವೇ ನಮ್ಮ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲವಾದರೆ ಈಡೇರುವವರೆಗೂ ಅನಿರ್ಧಿಷ್ಟವಧಿ ಮುಷ್ಕರವನ್ನು ಮಾಡುವುದಾಗಿ ಎಚ್ಚರಿಸಿದರು. ಇಲ್ಲದಿದ್ದರೆ ಕಾನೂನಿನ ಮೊರೆ ಹೋಗಲು ನಿರ್ಧರಿಸಬೇಕಾಗುತ್ತದೆ ಎಂದರು.

ಮುಷ್ಕರದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ (ಎಐಜಿಡಿಎಸ್‍ಯು) ಅಧ್ಯಕ್ಷ ಕೆ.ಜಿ. ಶಿವಾಜಿ, ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರಾಮೀಣ ಅಂಚೆ ನೌಕರರು ಎಐಪಿಇಯುಜಿಡಿಎಸ್ (ಎನ್‍ಎಫ್‍ಪಿಇ) ಅಧ್ಯಕ್ಷ ಕುಮಾರ್, ರಾಷ್ಟ್ರೀಯ ಅಂಚೆ ನೌಕರರ ಸಂಘ, ಗ್ರಾಮೀಣ ಅಂಚೆ ನೌಕರರಾದ (ಎನ್‍ಯುಜಿಡಿಎಸ್) (ಎಫ್‍ಎನ್‍ಪಿಓ) ಅಧ್ಯಕ್ಷ ಹೊನ್ನೇಗೌಡ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News