2019ರ ಚುನಾವಣೆಯಲ್ಲೂ ಮೋದಿ ಪ್ರಧಾನಿಯಾಗುವುದು ನಿಶ್ಚಿತ: ಕೆ.ಎಸ್. ಈಶ್ವರಪ್ಪ

Update: 2018-05-26 17:31 GMT

ಹರಿಹರ,ಮೇ.26: ರಾಜ್ಯ, ರಾಷ್ಟ್ರದಲ್ಲಿ ಅವಕಾಶವಾದಿ ರಾಜಕಾರಣ ಮಾಡುವವರೆಲ್ಲಾ ಒಂದಾಗಿದ್ದು, ತೃತೀಯ ರಂಗದವರ ಆಟ ನಡೆಯಲ್ಲ. 2019ರ ಚುನಾವಣೆಯಲ್ಲೂ ಮತ್ತೆ ಮೋದಿ ಪ್ರಧಾನಿಯಾಗುವುದು ನಿಶ್ಚಿತ ಎಂದು ಬಿಜೆಪಿ ನಾಯಕ, ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ತಾಲೂಕಿನ ಹರಿಹರ ಸಮೀಪದ ಬೆಳ್ಳೂಡಿಯ ಕಾಗಿನೆಲೆ ಗುರುಪೀಠಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ, ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ತೃತೀಯ ರಂಗದ ಆಟವೆಲ್ಲಾ ನಡೆಯುವುದಿಲ್ಲ. 2019ರ ಚುನಾವಣೆಯಲ್ಲೂ ಬಿಜೆಪಿ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದರು. 

ಸಾಲ ಮನ್ನಾ ಮಾಡದಿದ್ದರೆ ಬಂದ್:
ಇನ್ನು 24 ಗಂಟೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್ ನಿಶ್ಚಿತ. ಚುನಾವಣೆ ಪೂರ್ವದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ರೈತರ ಸಾಲ ಮನ್ನಾ ಬಗ್ಗೆ ನುಣುಚಿಕೊಳ್ಳಲು ಯತ್ನಿಸುತ್ತಿರುವುದು ಸರಿಯಲ್ಲ ಎಂದರು.

ಬಿಜೆಪಿ ಎಂದಿಗೂ ರೈತರ ಪರ ನಿಲ್ಲುತ್ತಾ ಬಂದ ಪಕ್ಷ. ರೈತರ ಸಾಲ ಮನ್ನಾ ವಿಚಾರದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡದಿದ್ದರೆ ಮೇ 28ರಂದು ಕರ್ನಾಟಕ ಬಂದ್ ನಿಶ್ಚಿತ. ಈ ಬಗ್ಗೆ ಯಾವುದೇ ಅನುಮಾನವೂ ಬೇಡ ಎಂದರು.

ಇದೇ ಸಂದರ್ಭ ಕೆ.ಎಸ್. ಈಶ್ವರಪ್ಪ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮಿಗಳ ಆಶೀರ್ವಾದ ಪಡೆದರು. ಬಿಜೆಪಿ ಮುಖಂಡರಾದ ದಾವಣಗೆರೆ ಮಾಜಿ ಮೇಯರ್ ಎಚ್.ಎನ್. ಗುರುನಾಥ, ಮಾಜಿ ಉಪ ಮೇಯರ್ ಪಿ.ಎಸ್.ಜಯಣ್ಣ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ, ಬಿ.ಎಸ್. ಜಗದೀಶ, ರವಿ ಕುರಿಯವರ್, ಪಿ.ಎಸ್.ಬಸವರಾಜ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News