ಜನರ ತೀರ್ಪಿನಂತೆ ನಾನು ಜನಪತ್ರಿನಿಧಿಯಾಗಲು ಯೋಗ್ಯನಲ್ಲ: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ

Update: 2018-05-26 17:54 GMT

ನಾಗಮಂಗಲ, ಮೇ 26: ಕ್ಷೇತ್ರದ ಚುನಾವಣಾ ಫಲಿತಾಂಶ ನೋಡಿದರೆ ನಾನು ನಾಗಮಂಗಲ ಜನಪ್ರತಿನಿಧಿಯಾಗಲು ಯೋಗ್ಯನಲ್ಲವೆಂದು ಜನರು  ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷ ಟಿಕೇಟ್ ಕೊಟ್ಟರೂ ತಾನು ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತನಗೆ ಮತಕೊಟ್ಟ ಮತ್ತು ಮತ ನೀಡದ ಮತದಾರರಿಗೂ ಕೃತಜ್ಞತೆ ಅರ್ಪಿಸುತ್ತೇನೆ. ನಾನು ರಾಜಕಾರಣ ಕಂಡಂತೆ ಇಷ್ಟೊಂದು ದೊಡ್ಡ ಅಂತರದ ಸೋಲು ಯಾರಿಗೂ ಸಿಕ್ಕಿಲ್ಲ. 23 ವರ್ಷ ರಾಜಕಾರಣ ಮಾಡಿರುವ ನಾನು 47 ಸಾವಿರ ಅಂತರದಲ್ಲಿ ಸೋಲು ಕಂಡಿರುವುದು ನೋಡಿದರೆ ನಾನು ಕ್ಷೇತ್ರದಲ್ಲಿ ಕೆಲಸ ಮಾಡಲು ಮತ್ತು ಮತ್ತೆ ಜನಪ್ರತಿನಿಧಿಯಾಗಲು ಯೋಗ್ಯನಲ್ಲ ಎಂದು ತೀರ್ಮಾನಿಸಿದ್ದಾರೆ. ಜನರ ತೀರ್ಪನ್ನು ಸ್ವಾಗತಿಸುವುದನ್ನು ಬಿಟ್ಟರೆ ಯಾವಕಾರಣಕ್ಕೆ  ನನ್ನನ್ನು ಸೋಲಿಸಿದ್ದಾರೆ ಎಂದು ವಿಶ್ಲೇಷಣೆ ಅಗತ್ಯವಿಲ್ಲ ಎಂದು ಅವರು ಹೇಳಿದರು. 

ಜನರು ತಮಗೆ ಎಂತವರು ಬೇಕೆಂದು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಇಷ್ಟಾರ್ಥಗಳು ಅವರಿಂದಲೇ ನೆರವೇರಲಿ ಎಂದು ಪರೋಕ್ಷವಾಗಿ ತನ್ನ ಎದುರಾಗಿ ಜೆಡಿಎಸ್ ಪಕ್ಷದಿಂದ ಭಾರಿ ಅಂತರದಿಂದ ಗೆಲುವು ಸಾಧಿಸಿರುವ ಶಾಸಕ ಕೆ.ಸುರೇಶ್‍ಗೌಡ ಅವರಿಗೆ ಚಲುವರಾಯಸ್ವಾಮಿ ಶುಭ ಕೋರಿದರು.

ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದು, ಪಕ್ಕದ ಮೈಸೂರು ಜಿಲ್ಲೆಯಲ್ಲೂ ಹೆಚ್ಚು ಸ್ಥಾನ ಗೆದ್ದಿದೆ. ಇನ್ನೂ ಕೆಲವೇ ತಿಂಗಳಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸಂಸದರ ರಾಜೀನಾಮೆಯಿಂದ ತೆರವಾಗಿರುವ ಲೋಕಸಭೆ ಉಪಚುನಾವಣೆ  ಮತ್ತು 2019ರ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಟಿಕೇಟ್ ಕೊಟ್ಟರೂ ನಾನು ಸ್ಪರ್ಧಿಸುವುದಿಲ್ಲ. ಇದು ನನ್ನ ಸ್ಪಷ್ಟ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.

ನಾನು ಕಾಂಗ್ರೆಸ್ ಪಕ್ಷದ ಎಲ್ಲ ಚಟುವಟಿಕೆಯಲ್ಲೂ ಸಕ್ರಿಯವಾಗಿ ಇರುತ್ತೇನೆ. ಆದ್ದರಿಂದ ಕ್ಷೇತ್ರದಲ್ಲಿ ಹೆಚ್ಚು ಉಳಿದುಕೊಳ್ಳಲು ಆಗುವುದಿಲ್ಲ. ರಾಜಕಾಣಕ್ಕೆ ಆಸಕ್ತಿ ಇರುವವರು ಮುಂದೆ ಬಂದರೆ ಅವರ ಬೆಂಬಲಕ್ಕೆ ನಿಂತು ಪಕ್ಷದ ಕಟ್ಟಾಳಾಗಿ ದುಡಿಯುತ್ತೇನೆ. ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ ಎಂದು  ಅವರು ಭರವಸೆ ನೀಡಿದರು.

ಎಚ್‍ಡಿಕೆಯೊಂದಿಗೆ ಸ್ನೇಹದ ಪ್ರಶ್ನೆಯೇ ಇಲ್ಲ:
ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲಿ ಕಾಂಗ್ರೇಸ್ ಜೆಡಿಎಸ್ ಒಟ್ಟಾಗಿ ಮೈತ್ರಿ ಸರಕಾರ ರಚಿಸಿವೆ. ಪಕ್ಷದ ತೀರ್ಮಾನದಂತೆ ಶಾಸಕ ಝಮೀರ್ ಅಹಮದ್ ಸಿಎಂ ಕುಮಾರಸ್ವಾಮಿಯೊಂದಿಗೆ ಮಾತನಾಡಿದ್ದಾರೆ ಅಷ್ಟೆ. ಗೌರವ ಬಿಟ್ಟು ಅವರನ್ನು ಅಪ್ಪಿಕೊಂಡಿಲ್ಲ. ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬೇರೆ ಅರ್ಥ ಕಲ್ಪಿಸಿ ಚರ್ಚೆಯಾಗಿದೆ. ನಾನು ಮತ್ತೆ ಕುಮಾರಸ್ವಾಮಿಯೊಂದಿಗೆ ಹಳೆ ಸ್ನೇಹ ಬೆಸೆಯುವ ಪ್ರಶ್ನೆಯೇ ಇಲ್ಲ, ಅವರನ್ನು ಸಂಪರ್ಕಿಸಿಯೂ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.

ರಾಜ್ಯ ನಾಯಕರ ನಿಲುವಿನಂತೆ ಕಾಂಗ್ರೆಸ್ ಸಂಘಟನೆ:
ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷ ನೇರ ನೇರ ಪ್ರತಿಸ್ಪರ್ಧಿಯಾಗಿದ್ದು, ಈಗ ಎರಡೂ ಪಕ್ಷಗಳು ಮೈತ್ರಿ ಸರಕಾರ ರಚಿಸಿವೆ. 70:30ರ ಹೊಂದಾಣಿಕೆಯಂತೆ ಅಧಿಕಾರ ಹಂಚಿಕೊಂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಮಾಡಲು ಗಟ್ಟಿಯಾಗಿ ನಿಲ್ಲಲು ರಾಜ್ಯ ನಾಯಕರು ಜಿಲ್ಲಾ ರಾಜಕಾರಣವನ್ನು ಯಾವ ರೀತಿ ಪರಿಗಣಿಸುತ್ತಾರೆ ಅದರ ಮೇಲೆ ನಿರ್ಧಾರಿತವಾಗುತ್ತದೆ. ಜಿಲ್ಲಾ ಮುಖಂಡರು ಯಾವ ರೀತಿ ಸಹಕರಿಸುತ್ತಾರೆ ಎಂದು ಕಾದು ನೋಡಬೇಕು ಎಂದು ಮತ್ತೊಂದು ಪ್ರಶ್ನೆಗೆ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದರು.

ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಮುಖಂಡರಾದ ಕೊಣನೂರು ಹನುಮಂತು, ಶರತ್, ರಾಮಣ್ಣ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News