ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಅಸ್ತಿತ್ವ ಪ್ರಜಾಪ್ರಭುತ್ವಕ್ಕೆ ಸಂದ ಜಯ: ಎ.ಕೆ.ಸುಬ್ಬಯ್ಯ

Update: 2018-05-26 18:05 GMT

ಮಡಿಕೇರಿ,ಮೇ.26: ಸಮಾಜಕ್ಕೆ ಬೆಂಕಿಹಚ್ಚಿ ಮೈಕಾಯಿಸಿಕೊಳ್ಳುವ ಪಕ್ಷವಾದ ಬಿ.ಜೆ.ಪಿ. ಯನ್ನು ಅಧಿಕಾರದಿಂದ ಹೊರಗಿಡಲು ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆ.ಡಿ.(ಎಸ್) ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಪ್ರಜಾಪ್ರಭುತ್ವಕ್ಕೆ ಸಂದ ವಿಜಯವಾಗಿದೆ ಎಂದು ಹಿರಿಯ ರಾಜಕೀಯ ಮುತ್ಸಧಿ ಎ.ಕೆ. ಸುಬ್ಬಯ್ಯ ಅವರು ತಿಳಿಸಿದ್ದಾರೆ.

ಶನಿವಾರದಂದು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಇದೀಗ ವಿಶ್ವಾಸಮತವನ್ನು ಗೆಲ್ಲುವುದರ ಮೂಲಕ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿರುವುದು ಕರ್ನಾಟಕದ ಪ್ರಜಾತಂತ್ರಸ್ನೇಹಿ ಜನತೆಯಲ್ಲಿ ಹರ್ಷ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ನೂತನ ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುವುದಾಗಿ ಹೇಳಿದ್ದಾರಲ್ಲದೆ, ಅವರ ಸರಕಾರ ಸ್ವಚ್ಚ ಹಾಗೂ ದಕ್ಷ ಆಡಳಿತ ನೀಡುವುದರ ಮೂಲಕ ಯಶಸ್ವಿಯಾಗಿ ಅವಧಿ ಪೊರೈಸಲಿ ಎಂದು ಹಾರೈಸಿದ್ದಾರೆ.

ಬಂದ್ ಕರೆ ರೈತರ ಹಿತಾದೃಷ್ಠಿಯಿಂದ ಅಲ್ಲ: ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ಮತ್ತು ಸ್ಥಳವನ್ನು ನಿಗಧಿಮಾಡಿ ಅದನ್ನು ಘೋಷಣೆ ಮಾಡಿಕೊಂಡಿದ್ದ ಬಿ. ಎಸ್. ಯಡಿಯೂರಪ್ಪನವರು ಕೊನೆಗೆ ಅಧಿಕಾರ ಕೈಗೆ ಎಟುಕದಿದ್ದಾಗ ಇದೀಗ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡು ಅರಚಾಡುತ್ತಿರುವುದು ಖೇದಕರ. 24 ಗಂಟೆಯೊಳಗೆ  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್ ಆಚರಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆಗಿರುವ ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಈ ಬಂದ್ ಕರೆ ತನ್ನ ರಾಜಕೀಯ ಎದುರಾಳಿಗಳ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಹೊರತು ಇವರಿಗೆ ರೈತರ ಮೇಲಿರುವ ಕಾಳಜಿ ಮತ್ತು ರೈತರ ಹಿತಾದೃಷ್ಟಿಯ ಹಿನ್ನೆಲೆಯಿಂದ ಅಲ್ಲ. ಇದು ಸಮಾಜದ ಶಾಂತಿಯುತ ಬದುಕಿಗೆ ಬೆಂಕಿಯಿಟ್ಟು ಮೈಕಾಯಿಸಿಕೊಳ್ಳುವ ಪ್ರವೃತ್ತಿ ಅಲ್ಲದೆ ಬೇರೆನೂ ಅಲ್ಲ. ಇದೊಂದು ಸಮಾಜಘಾತುಕ ಚಟುವಟಿಕೆಯೂ ಸಹ ಹೌದು ಎಂದು ಸುಬ್ಬಯ್ಯ ಆರೋಪಿಸಿದ್ದಾರೆ.

ಬಂದ್ ಅನ್ನು ನಿರಾಕರಿಸಿ ಪ್ರತಿರೋಧಿಸಬೇಕು: ಬಿ.ಎಸ್. ಯಡಿಯೂರಪ್ಪ ಅವರ ಬಂದ್ ಕರೆಯನ್ನು ತಾವು ಉಗ್ರವಾಗಿ ಖಂಡಿಸುವುದಾಗಿ ತಿಳಿಸಿರುವ ಎ.ಕೆ. ಸುಬ್ಬಯ್ಯ ಅವರು, ಬಂದ್ ಆಚರಣೆ ಸಂವಿಧಾನ ವಿರೋಧಿ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಬಿ. ಎಸ್. ಯಡಿಯೂರಪ್ಪ ಅವರು ಕರೆ ನೀಡಿದ ಬಂದ್ ಆಚರಿಸಲ್ಪಟ್ಟು ಈ ಬಂದ್ ಹಿನ್ನೆಲೆಯಲ್ಲಿ ಯಾವುದೇ ನಷ್ಟ-ಕಷ್ಟಗಳು, ಅನಾಹುತಗಳು, ಸಾರ್ವಜನಿಕ ಮತ್ತು ಜನರ ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದರೆ ಅದಕ್ಕೆಲ್ಲಾ ಬಿ.ಎಸ್. ಯಡಿಯೂರಪ್ಪ ಅವರನ್ನೆ ಹೊಣೆಗಾರರನ್ನಾಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.

ಅದ್ದರಿಂದ ಎಲ್ಲಾ ಜನತೆ ಇಂಥಹ ಕಾನೂನುಬಾಹಿರ ಮತ್ತು ಸಮಾಜಘಾತುಕ ಬಂದ್ ಅನ್ನು ಆಚರಿಸಲು ನಿರಾಕರಿಸಿ ಪ್ರತಿರೋಧಿಸಬೇಕು ಎಂದು ನಾನು ಕರ್ನಾಟಕದ ಶಾಂತಿಪ್ರೀಯ ಜನತೆಯಲ್ಲಿ ಮನವಿ ಮಾಡುವುದಾಗಿ ಎ.ಕೆ. ಸುಬ್ಬಯ್ಯ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News