×
Ad

ಮಡಿಕೇರಿ: ಕಳಕಂಡ ತಂಡಕ್ಕೆ ಪ್ರತಿಷ್ಟಿತ ಮಡ್ಲಂಡ ಕ್ರಿಕೆಟ್ ಕಪ್

Update: 2018-05-27 22:55 IST

ಮಡಿಕೇರಿ,ಮೇ.27: ಕೊಡವ ಕ್ರಿಕೆಟ್ ಅಸೋಸಿಯೇಷನ್ ಮತ್ತು ಮಡ್ಲಂಡ ಕುಟುಂಬಸ್ಥರ ಸಂಯುಕ್ತಾಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿತವಾಗಿದ್ದ ಮಡ್ಲಂಡ ಕ್ರಿಕೆಟ್ ಕಪ್ ಗೆ ರೋಚಕ ತೆರೆ ಬಿದ್ದಿದೆ. ಪ್ರತಿಷ್ಟಿತ ಮಡ್ಲಂಡ ಕ್ರಿಕೆಟ್ ಕಪ್ ನ್ನು ಕಳೆದ ವರ್ಷದ ಚಾಂಪಿಯನ್ ತಂಡವಾಗಿರುವ  ಕಳಕಂಡ ತಂಡ ಪಡೆಯುವ ಮೂಲಕ ಬಲಿಷ್ಟ ತಂಡವಾಗಿ ಹೊರಹೊಮ್ಮಿತು. ತಂಬುಕುತ್ತೀರ ತಂಡ ರನ್ನರ್ಸ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯಾಟದಲ್ಲಿ ತಂಬುಕುತ್ತೀರ ತಂಡ ಟಾಸ್ ಗೆದ್ದು ಕಳೆದ ಬಾರಿಯ ಅಳಮೇಗಂಡ ಕಪ್ ವಿಜೇತ ತಂಡವಾದ ಕಳಕಂಡ ತಂಡಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. 15 ಓವರ್ ಗಳ ನಿಗಧಿತ ಪಂದ್ಯದ ಪ್ರಾರಂಭದಲ್ಲಿಯೇ ಕಳಕಂಡ ತಂಡ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. 

ಕಳಕಂಡ ತಂಡದ ನಿಖಿಲ್ ಅತ್ಯುತ್ತಮ ಹೊಡೆತಗಳ ಮೂಲಕ 27 ಬಾಲ್ ಗಳಿಗೆ  41 ರನ್ ಪೇರಿಸಿದರೆ, ಕಳಕಂಡ ರಾಖಿನ್ 14 ಬಾಲ್ ಗಳಿಗೆ 25 ರನ್, ಮಧು 9 ಬಾಲ್ ಗಳಿಗೆ 21 ರನ್, ಕಾಯ9ಪ್ಪ 8 ಎಸೆತಗಳಿಗೆ 12 ರನ್, ನಿತಿನ್ 6, ನಿರನ್ 4, ಪ್ರಸನ್ನ 2, ಭರತ್ 1, ಜೀತು 3 ರನ್ ಪೇರಿಸಿದರು.
ಕಳಕಂಡ ತಂಡ 15 ಓವರ್ ಗಳಲ್ಲಿ ತನ್ನ 8 ವಿಕೆಟ್ ಕಳೆದುಕೊಂಡು ತಂಬುಕುತ್ತೀರ ತಂಡಕ್ಕೆ 134 ರನ್ ಗಳ ಬೆನ್ನಟ್ಟುವ ಗುರಿ ನೀಡಿತು. ಕಳಕಂಡ ತಂಡದ ಪ್ರಬಲ ಬೌಲಿಂಗ್ ತಂಬುಕುತ್ತೀರ ತಂಡದ ಆಟಗಾರರನ್ನು ಪ್ರಾರಂಭದಲ್ಲಿಯೇ ಹಿಡಿದಿಡುವಲ್ಲಿ ಸಫಲವಾಯಿತು. 

ತಂಬುಕುತ್ತೀರ ಅನಿಲ್ 23 ರನ್, ಸುರೇಶ್ 17, ಮಧು 15, ಮದನ್ 13, ಅರುಣ್ 12, ಮಿಲನ್ 12, ಭೀಮಯ್ಯ 11, ಸಾಗರ್ 6 ರನ್ ಗಳನ್ನು ಪೇರಿಸಿದರಾದರೂ ಕಳಕಂಡ ತಂಡ ಮುಂದಿಟ್ಟಿದ್ದ 134 ರನ್ ಗಳ ಗುರಿ ಮುಟ್ಟಲಾಗದೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 113 ರನ್ ಪಡೆದುಕೊಂಡು 21 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಕಳಕಂಡ ತಂಡದ ಭರತ್ ಹ್ಯಾಟ್ರಿಕ್ ಸಾಧನೆಯೊಂದಿಗೆ 4 ವಿಕೆಟ್ ಪಡೆದುಕೊಂಡರೆ, ಪ್ರಸನ್ನ 3 ವಿಕೆಟ್ ಪಡೆದುಕೊಂಡರು. ಉಳಿದಂತೆ ಕಳಕಂಡ ತಂಡದ ಮಧು, ನಿತಿನ್, ಕಾರ್ಯಪ್ಪ ತಲಾ 1 ವಿಕೆಟ್ ಪಡೆದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 

ಎಚ್.ಬಿ.ಓ. ಚಾನಲ್ ನ ಪೋಗೋ ಕಾರ್ಟೂನ್ ವಿಭಾಗದ ಹಿರಿಯ ನಿರ್ದೇಶಕ ಚೇರಂಡ ಕಿಶನ್ ಬ್ಯಾಟ್ ಮಾಡುವ ಮೂಲಕ ಫೈನಲ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಚೇರಂಡ ಕಿಶನ್, ಮಡ್ಲಂಡ ಕುಟುಂಬ ಸದಸ್ಯರ ಸಂಖ್ಯಾ ಬಲ ಕಡಮೆಯಿದ್ದರೂ ಅತ್ಯುತ್ತಮವಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ ಎಂದು ಶ್ಲಾಘಿಸಿದರು. ಮುಂಬರುವ ದಿನಗಳಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸುವಂತೆ ಮಾಡುವ ನಿಟ್ಟಿನಲ್ಲಿ ಕ್ರಿಕೆಟ್ ಫೆಡರೇಷನ್ ಸಹಕಾರಕ್ಕೆ ಪ್ರಯತ್ನಿಸುವುದಾಗಿ ಕಿಶನ್ ಭರವಸೆ ನೀಡಿದರು. 

ಕೊಡವ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಅನಿರೀಕ್ಷಿತ ಮಳೆಯಿಂದಾಗಿ ಕ್ರಿಕೆಟ್ ಪಂದ್ಯಾಟಗಳಿಗೆ ಹಲವಾರು ಬಾರಿ ಅಡ್ಡಿಯುಂಟಾಗಿದ್ದರೂ ಮಡ್ಲಂಡ ಕುಟುಂಬಸ್ಥರ ಶ್ರಮ, ಪಂದ್ಯಾಟದಲ್ಲಿ ಪಾಲ್ಗೊಂಡ ತಂಡಗಳ ಬೆಂಬಲ, ತಾಂತ್ರಿಕ ಸಮಿತಿಯ ಸಹಕಾರದಿಂದಾಗಿ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಂತ್ರಿಕ ಸಮಿತಿ ಅಧ್ಯಕ್ಷ ಪೊರದಂಡ ಸುನೀಲ್ ಮಾತನಾಡಿ, ಮಡ್ಲಂಡ ಕುಟುಂಬಸ್ಥರು ಕಡಮೆ ಸಂಖ್ಯೆಯಲ್ಲಿದ್ದರೂ 216 ತಂಡಗಳನ್ನು ಒಳಗೊಂಡ ಪಂದ್ಯಾಟ ನಡೆಸಿ ಸಾಧನೆ ತೋರಿದ್ದಾರೆ. ಇದು ಇತರ ಕೊಡವ ಕುಟುಂಬಗಳಿಗೆ ಮಾದರಿಯಾಗಿದೆ ಎಂದು ಮಡ್ಲಂಡ ಕುಟುಂಬಸ್ಥರ ಶ್ರಮ ಶ್ಲಾಘಿಸಿ, ಕ್ರೀಡಾಕೂಟಗಳಲ್ಲಿ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸುವಂತೆ ಕರೆ ನೀಡಿದರು.

ಮುಕ್ಕೋಡ್ಲು ವ್ಯಾಲಿಡ್ಯೂ ತಂಡದಿಂದ ಚೌರಿಯಾಟ್, ಕತ್ತಿಯಾಟ್, ಕೋಲಾಟ್, ಉಮ್ಮತ್ತಾಟ್ ಪ್ರದಶ9ನಗಳು ಪ್ರೇಕ್ಷಕರ ಮನಸೆಳೆದವು. ಫೈನಲ್  ಪಂದ್ಯಾಟದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮಡ್ಲಂಡ ಕಪ್ ವಿಜೇತ ಕಳಕಂಡ ತಂಡಕ್ಕೆ ಚೇರಂಡ ಕಿಶನ್ ಚಾಂಪಿಯನ್ ಟ್ರೋಫಿ, ತಂಬುಕುತ್ತೀರ ತಂಡಕ್ಕೆ ರನ್ನರ್ಸ್ ಟ್ರೋಫಿ ವಿತರಿಸಿದರು.

ಕುಟ್ಟಂಡ ಕುಟ್ಟಪ್ಪ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರೆ, ತಂಬುಕುತ್ತೀರ ಅನಿಲ್ ಪಂದ್ಯ ಶ್ರೇಷ್ಟ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಫೈನಲ್ ಪಂದ್ಯದ ಸಾಧಕ ಆಟಗಾರರಾಗಿ ಕಳಕಂಡ ನಿಖಿಲ್ ವೈಯಕ್ತಿಕ ಬಹುಮಾನ ಪಡೆದರು. ಉತ್ತಮ ತಂಡ ಪ್ರಶಸ್ತಿಯನ್ನು ಕಾಡ್ಯಮಾಡ ಕುಟುಂಬ ತಂಡ ಪಡೆದುಕೊಂಡರೆ ಅಮ್ಮಾಟಂಡ ತಂಡ ಉದಯೋನ್ಮುಖ ತಂಡವಾಗಿ ಹೊರಹೊಮ್ಮಿತು. 
                                                                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News