×
Ad

ಚಿಕ್ಕಮಗಳೂರು: ವಿದ್ಯುತ್ ಹರಿದು ಮೂರು ಹಸುಗಳು ಸಾವು; ತಪ್ಪಿದ ಭಾರೀ ಅನಾಹುತ

Update: 2018-05-27 23:15 IST

ಚಿಕ್ಕಮಗಳೂರು, ಮೇ 27:  ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದ ಪರಿಣಾಮ ನೆಲದ ಮೇಲಿದ್ದ ನೀರಿನ ತೇವಾಂಶದ ಮೂಲಕ ವಿದ್ಯುತ್ ಹರಿದು ಮೂರು ಹಸುಗಳು ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಾಳು ಗ್ರಾಮದಲ್ಲಿ ರವಿವಾರ ಮುಂಜಾನೆ ವರದಿಯಾಗಿದೆ. 

ತಾಲೂಕಿನ ನಾಗರಾಳು ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಬಾರಿ ಮಳೆಗೆ ಗ್ರಾಮದ ಹೊಲವೊಂದರ ಬಳಿಯ ದಾರಿಯಲ್ಲಿದ್ದ ವಿದ್ಯುತ್ ಕಂಬದ ತಂತಿಗಳು ನೆಲ್ಲಕ್ಕೆ ಬಿದ್ದಿವೆ. ಈ ವಿದ್ಯುತ್ ತಂತಿ ಮೂಲಕ ನೆಲದಲ್ಲಿದ್ದ ನೀರಿನ ಮೂಲಕ ವಿದ್ಯುತ್ ದಾರಿಯುದ್ದಕ್ಕೂ ಹರಿಯುತ್ತಿತ್ತು. ರವಿವಾರ ಮುಂಜಾನೆ ಗ್ರಾಮದ ಜಗದೀಶ್ ಎಂಬವರು ಈ ದಾರಿಯಲ್ಲಿ ತಮ್ಮ ಮೂರು ಹಸುಗಳನ್ನು ಹೊಲಗಳತ್ತ ಮೇಯಲು ಬಿಟ್ಟಿದ್ದರು. ವಿದ್ಯುತ್ ಹರಿಯುತ್ತಿದ್ದ ರಸ್ತೆಯಲ್ಲಿ ಹಸುಗಳು ಹೋಗುತ್ತಿದ್ದಂತೆ ಮೂರೂ ಹಸುಗಳಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಹಸುಗಳು ಸತ್ತು ಬಿದ್ದ ಸುದ್ದಿ ತಿಳಿದ ಗ್ರಾಮಸ್ಥರು ವಿದ್ಯುತ್ ತಂತಿ ತುಂಡಾಗಿರುವುದನ್ನು ಗಮನಿಸಿ ಕೂಡಲೆ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಕಚ್ಛಾ ರಸ್ತೆಯಲ್ಲಿ ಪ್ರತಿದಿನ ನೂರಾರು ಗ್ರಾಮಸ್ಥರು ತಿರುಗಾಡುತ್ತಿದ್ದ ದನಗಳ ಹೊರತಾಗಿ ಗ್ರಾಮಸ್ಥರು ಮುಂಜಾನೆ ಈ ದಾರಿಯಲ್ಲಿ ಬಂದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ನಾಗರಾಳು ಗ್ರಾಮದ ನಿವಾಸಿಗಳು ತಿಳಿಸಿದ್ದಾರೆ.

ಘಟನೆ ಸಂಬಂಧ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ಹಸುಗಳ ಒಟ್ಟು ಮೌಲ್ಯ ಎರಡು ಲಕ್ಷ ಎಂದು ಅಂದಾಜಿಸಲಾಗಿದ್ದು, ಹಸು ಕಳೆದುಕೊಂಡಿರುವ ಜಗದೀಶ್ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News