"ಬಿಜೆಪಿ ಕಡೆಯವರಿಂದ ನನ್ನನ್ನು ಅಪಹರಿಸುವ ವಿಫಲ ಸಂಚು ನಡೆದಿತ್ತು"

Update: 2018-05-28 13:10 GMT

ಶೃಂಗೇರಿ, ಮೇ 28: ರೆಸಾರ್ಟ್ ರಾಜಕಾರಣವನ್ನು ಸದಾ ವಿರೋಧಿಸಿಕೊಂಡು ಬಂದ ನನಗೆ ಅನಿವಾರ್ಯವಾಗಿ ಹತ್ತು ದಿನಗಳ ಕಾಲ ರೆಸಾರ್ಟ್‍ನಲ್ಲಿ ಉಳಿದುಕೊಳ್ಳುವ ಪರಿಸ್ಥಿತಿಯು ಒದಗಿ ಬಂದಿತ್ತು. ಇದಕ್ಕೆಲ್ಲಾ ಕಾರಣ ಬಿಜೆಪಿ ಎಂದು ಕ್ಷೇತ್ರದ ನೂತನ ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.

ಅವರು ಚುನಾವಣಾ ಫಲಿತಾಂಶದ ನಂತರ ನಡೆದ ರಾಜಕೀಯ ಬೆಳವಣಿಯಿಂದಾಗಿ ಇದುವರೆಗೂ ಬೆಂಗಳೂರಿನ ರೆಸಾರ್ಟ್‍ನಲ್ಲಿದ್ದು, ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ತಿಳಿಸುವ ಸಲುವಾಗಿ ಸೋಮವಾರ ಪಟ್ಟಣದ ಇಂದಿರಾ ಭವನಕ್ಕೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದರು.

'ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಅಧಿಕಾರಕ್ಕಾಗಿ ಕಾಂಗ್ರೆಸ್ ನ ಎಲ್ಲಾ ಶಾಸಕರಿಗೂ ಇನ್ನಿಲ್ಲದ ಆಮಿಷ ಮತ್ತು ಒತ್ತಡವನ್ನು ಹಾಕಿದ್ದರು. ಒಂದು ಸಂದರ್ಭದಲ್ಲಿ ನನ್ನ ಅಪಹರಣ ಸಂಚಿನ ವಿಫಲ ಯತ್ನವೂ ನಡೆಯಿತು ಎಂದು ಗಂಭೀರ ಆರೋಪ ಮಾಡಿದ ಅವರು, ಈ ಭಯಾನಕ ಪರಿಸ್ಥಿತಿಯಿಂದ ಕಾಪಾಡಲು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಪಕ್ಷವು ನಮ್ಮನ್ನು ರೆಸಾರ್ಟ್‍ಗೆ ಕೊಂಡೊಯ್ಯಬೇಕಾಯಿತು. ಈ ಘಟನೆಯಿಂದ ತನಗೆ ನೋವಾಗಿದ್ದು, ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂದು ತಿಳಿಸಿದರು.

ಕಳೆದ ಬಾರಿ ಸೋತ ನಂತರ ಛಲಬಿಡದೇ ತಾನು ಕ್ಷೇತ್ರದ ಎಲ್ಲಾ ಹಳ್ಳಿಗಳ ಸಂಪರ್ಕ ಇಟ್ಟುಕೊಂಡು ನಿರಂತರವಾಗಿ ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದೆ. ಇದು ಈ ಬಾರಿ ನನ್ನ ಗೆಲುವಿಗೆ ದಾರಿ ಮಾಡಿ ಕೊಟ್ಟಿತು. ಕ್ಷೇತ್ರದ ಜನರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಮೇಲ್ಮನೆ ಚುನಾವಣೆಯ ಕಾರಣ ಇನ್ನೂ 8 ದಿನಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಜೂ.10ರ ನಂತರ ಶೃಂಗೇರಿ, ಕೊಪ್ಪ, ನ.ರಾ.ಪುರದ ಜನತೆಯನ್ನು ಖುದ್ದಾಗಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್.ನಟರಾಜ ಮಾತನಾಡಿ, ಈ ಬ್ಲಾಕ್‍ನಲ್ಲಿ ಕಾಂಗ್ರೆಸ್ ಬಹಳ ಕಾಲದಿಂದ ಹಿನ್ನೆಡೆ ಅನುಭವಿಸುತ್ತಿತ್ತು. ಈ ಬಾರಿ ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಿದ್ದು, 24 ಬೂತನಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಕಾಂಗ್ರೆಸ್ ನಡುವಿನ ಮತಗಳ ಅಂತರವು ಈ ಬಾರಿ ಗಣನೀಯವಾಗಿ ಕಡಿಮೆ ಆಗಿದೆ. ಇದಕ್ಕಾಗಿ ಎಲ್ಲಾ ಕಾರ್ಯಕರ್ತರಿಗೂ, ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷದ ಗೆಲುವಿನ ನಂತರದಲ್ಲಿ ನಮ್ಮ ಕಾರ್ಯಕರ್ತರು ಎಲ್ಲೂ ಅಹಿತಕರ ಘಟನೆಗೆ ಅವಕಾಶ ಕೊಡದೇ ಶಾಂತಿ, ಸಂಯಮ ಕಾಪಾಡಿಕೊಂಡು ಮೇಲ್ಪಂಕ್ತಿ ಹಾಕಿದ್ದಾರೆ ಎಂದು ನುಡಿದರು.

ಗೋಷ್ಠಿಯಲ್ಲಿ ಪಕ್ಷದ ವಕ್ತಾರ ಉಮೇಶ ಪೂದುವಾಳ್, ಪ್ರಚಾರ ಸಮಿತಿಯ ವೆಂಕಟೇಶ್, ವಿದ್ಯಾರಣ್ಯಪುರ ಗ್ರಾ.ಪಂ. ಅಧ್ಯಕ್ಷ ರಾಜೇಶ ಶೆಟ್ಟಿ, ನೆಮ್ಮಾರು ದಿನೇಶ್, ರಮೇಶ ಭಟ್ ಮತ್ತು ಪೂರ್ಣಿಮಾ ಸಿದ್ಧಪ್ಪ ಉಪಸ್ಥಿತರಿದ್ದರು.

ಹಿಂದಿನ ಶಾಸಕರ ಕಾಲದಲ್ಲಿ ಜನರ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಹೋರಾಟ ಮಾಡಿದ್ದೆವು. ಅವುಗಳನ್ನು ಪರಿಹರಿಸುವುದರತ್ತ ನನ್ನ ಮೊದಲ ಗಮನ ಇರಲಿದೆ. ಅಕ್ರಮ-ಸಕ್ರಮದ ಹಕ್ಕುಪತ್ರ ವಿತರಣೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ತುಂಬುವುದು, ನಿಷ್ಕ್ರೀಯವಾಗಿದ್ದ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ ಹೊಸ ಸಮಿತಿ ರಚಿಸುವುದು, ಕಾಲೇಜು ಕಟ್ಟಡ, ರಸ್ತೆ ದುರಸ್ತಿಗೊಳಿಸುವುದರ ಕಡೆಗೆ ಗಮನ ಹರಿಸಿ ಗುಣಾತ್ಮಕ ಕಾರ್ಯ ಮಾಡಿ ತೋರಿಸುತ್ತೇನೆ. ಕ್ಷೇತ್ರದ ಮತದಾರರು ತನ್ನೊಂದಿಗೆ ಸಹಕರಿಸಬೇಕು. ಜನತೆ ನೀಡುವ ಸಲಹೆ, ಟೀಕೆ, ಪ್ರಶಂಸೆಗಳೆಲ್ಲವನ್ನು ಸಮನಾಗಿ ಸ್ವೀಕರಿಸುತ್ತೇನೆ.
- ಟಿ.ಡಿ.ರಾಜೇಗೌಡ, ನೂತನ ಶಾಸಕ, ಶೃಂಗೇರಿ ಕ್ಷೇತ್ರ

ಕ್ಷೇತ್ರದ ನೂತನ ಶಾಸಕ ಟಿ.ಡಿ.ರಾಜೇಗೌಡರು ಸೋಮವಾರ ಶೃಂಗೇರಿಗೆ ಆಗಮಿಸಿ, ಶಾರದಾಂಬೆ ದರ್ಶನಗೈದು ಜಗದ್ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಸ್ವೀಕರಿಸಿದರು. ನಂತರ ಶ್ರೀಆದಿಚುಂಚನಗಿರಿ ಶಾಖಾ ಮಠಕ್ಕೆ ತೆರಳಿದ ಅವರು, ಅಲ್ಲಿ ಶ್ರೀಗುಣನಾಥ ಶ್ರೀಗಳನ್ನು ಭೇಟಿ ಮಾಡಿದರು. ನಂತರ ಪಟ್ಟಣದ ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು ನಂತರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ಅಪಘಾತದಲ್ಲಿ ನಿಧನ ಹೊಂದಿದ ಜಮಖಂಡಿ ಕ್ಷೇತ್ರದ ಶಾಸಕ ಸಿದ್ದುನ್ಯಾಮಗೌಡರಿಗೆ ಶೃದ್ಧಾಂಜಲಿ ಸಲ್ಲಿಸಿದರು. ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಅಂಗುರ್ಡಿ ದಿನೇಶ್ ಅವರು ರಾಜೇಗೌಡರಿಗೆ ಮಾಲಾರ್ಪಣೆಗೈದು ಅಭಿನಂದಿಸಿದರು.  


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News