ಚಿಕ್ಕಮಗಳೂರು: ಭಾರೀ ಗಾತ್ರದ ಕೆರೆ ಹಾವನ್ನು ನುಂಗಿದ ಕಾಳಿಂಗ ಸರ್ಪ

Update: 2018-05-28 13:17 GMT

ಚಿಕ್ಕಮಗಳೂರು, ಮೇ 28: ಕಳೆದ ಮೂರು ದಿನಗಳ ಹಿಂದೆ ಮನೆಯ ಛಾವಣಿಯಲ್ಲಿ ಕೆರೆ ಹಾವೊಂದನ್ನು ಹಿಡಿದು ನುಂಗಿದ ಕಾಳಿಂಗ ಸರ್ಪ ಸಂಚರಿಸಲಾಗದೇ ಛಾವಣಿಯಲ್ಲೇ ಸಿಲುಕಿಕೊಂಡಿದ್ದು, ನಗರದ ಉರಗ ತಜ್ಞ ಸ್ನೆಕ್ ನರೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರೊಂದಿಗೆ ಸೇರಿ ಹರಸಾಹಸಪಟ್ಟು ಹಾವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ಸೋಮವಾರ ಜಿಲ್ಲೆಯ ಆಲೇಖಾನ್ ಹೊರಟ್ಟಿಯಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿ ಗ್ರಾಮದ ಮನೆಯ ಛಾವಣಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕೆರೆ ಹಾವೊಂದನ್ನು ಬೆನ್ನಟ್ಟಿ ಬಂದ ಕಾಳಿಂಗ ಸರ್ಪ ಕೆರೆ ಹಾವು ಮನೆಯ ಛಾವಣಿ ಸೇರಿಕೊಂಡರೂ ಬಿಡದೇ ಅಟ್ಟಾಡಿಸಿ ಹಿಡಿದಿದೆ. ನಂತರ ಭಾರೀ ಗಾತ್ರದ ಕೆರೆಹಾವನ್ನು ಛಾವಣಿಯಲ್ಲಿ ಮನೆಯವರು ನೋಡುತ್ತಿದ್ದಂತೆಯೇ ನುಂಗಿದೆ. ಕಾಳಿಂಗ ಸರ್ಪ ಕೆರೆ ಹಾವನ್ನು ನುಂಗಿದ ನಂತರವೂ ಮೂರು ದಿನಗಳ ಕಾಲ ಕದಲಿರಲಿಲ್ಲ ಎಂದು ತಿಳಿದು ಬಂದಿದೆ.

ಇದರಿಂದ ಹೆದರಿದ ಮನೆ ಮಾಲಕ ಗಿರೀಶ್ ಹಾಗೂ ಮನೆಯ ಸದಸ್ಯರು ಚಿಕ್ಕಮಗಳೂರಿನ ಉರಗತಜ್ಷ ಹಾಗೂ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಹಾಗೂ ಅರಣ್ಯ ಸಿಬ್ಬಂದಿ ಸೋಮವಾರ ಬೆಳಗಿನಿಂದ ಹಾವನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಿದ್ದಾರೆ. ಸುಮಾರು 2 ಗಂಟೆಗಳ ಕಾಲ ನರೇಶ್ ಹಾಗೂ ಅರಣ್ಯ ಸಿಬ್ಬಂದಿ ಹಾವನ್ನು ಸೆರೆ ಹಿಡಿಯಲು ಹರಸಾಹಪಟ್ಟರೆಂದು ಸ್ಥಳೀಯರು ತಿಳಿಸಿದ್ದಾರೆ. ಕೊನೆಗೆ ಸೆರೆ ಸಿಕ್ಕ ಹಾವನ್ನು ಸ್ನೇಕ್ ನರೇಶ್ ಹಾಗೂ ಅರಣ್ಯ ಸಿಬ್ಬಂದಿ ಸಮೀಪದ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News