ತುಮಕೂರು: ಮೇ.29 ರಿಂದ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳು ಆರಂಭ
ತುಮಕೂರು.ಮೇ.28: ಜಿಲ್ಲೆಯಲ್ಲಿ ಮೇ.29 ರಿಂದ ಶಾಲೆಗಳು ಆರಂಭಗೊಳ್ಳಲಿದ್ದು, ಶಾಲೆಗೆ ಮಕ್ಕಳನ್ನು ಬಹಳ ಖುಷಿಯಿಂದಲೇ ಬರಮಾಡಿಕೊಳ್ಳಲು ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಈಗಾಗಲೇ ಕೆಲ ಖಾಸಗಿ ಶಾಲೆಗಳು ಆರಂಭಗೊಂಡಿದ್ದರೂ, ಸರಕಾರದ ಆದೇಶದ ಪ್ರಕಾರ ಮೇ 29 ರಂದು 2018-19ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಹಾಗು ಸಮಾಜ ಇಲಾಖೆಗಳ ಅಡಿಯಲ್ಲಿ ನಡೆಯುವ ವಸತಿ ಶಾಲೆಗಳು ಸೇರಿದಂತೆ ಒಟ್ಟು 2896 ಶಾಲೆಗಳಿದ್ದು, ಇವುಗಳಲ್ಲಿ 1368 ಕಿರಿಯ, 1051 ಹಿರಿಯ ಪ್ರಾಥಮಿಕ ಶಾಲೆಗಳಾದರೆ, 477 ಪ್ರೌಢಶಾಲೆಗಳು ಆರಂಭಗೊಂಡಿವೆ.
ಸರಕಾರ ಈ ಬಾರಿ ಶಾಲೆ ಆರಂಭದ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಅಗತ್ಯ ಕ್ರಮ ಕೈಗೊಂಡಿದ್ದು, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಶಾಲೆಯ ಆಡಳಿತ ಮಂಡಳಿ ಶಾಲೆಯ ಆರಂಭದ ದಿನವೇ ಸಮವಸ್ತ್ರ ವಿತರಿಸಿದೆ.
ಸಮವಸ್ತ್ರಗಳು ಸಹ ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಗಳ ಶಾಲೆಗಳಿಗೆ ಸರಬರಾಜು ಮಾಡಿದ್ದು, ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕಗಳು ದೊರೆಯಲಿವೆ. ಶಾಲೆ ಆರಂಭದ ದಿನವೇ ಮಕ್ಕಳಿಗೆ ಸಿಹಿಯೊಂದಿಗೆ ಬಿಸಿಯೂಟ ಆರಂಭಿಸಬೇಕೆಂಬ ಇಲಾಖೆಯ ನಿರ್ದೇಶನದ ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿದ್ದು, ಎಲ್ಲಾ ಶಾಲಾ ಕಾಲೇಜುಗಳಿಗೆ ಅಗತ್ಯವಿರುವ ಪಡಿತರ ಮತ್ತು ಇನ್ನಿತರ ವಸ್ತುಗಳು ದಾಸ್ತಾನು ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ದೃಢಪಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಯಾವ ಸಿಹಿ ಅಡುಗೆ ಮಾಡಬೇಕು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಅಯಾಯ ಶಾಲೆಯ ಎಸ್.ಡಿ.ಎಂ.ಸಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.