ಶಿವಮೊಗ್ಗ: ಕುವೆಂಪು ವಿವಿ ವೆಬ್‍ಸೈಟ್ ಹ್ಯಾಕ್
ಶಿವಮೊಗ್ಗ, ಮೇ 28: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲೊಂದಾದ ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವ ವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್‍ನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ ಘಟನೆ ನಡೆದಿದೆ. ಜೊತೆಗೆ ವೆಬ್‍ಸೈಟ್ ಮುಖಪುಟದಲ್ಲಿ ಪ್ರಚೋದಕ ಬರಹ ಹರಿಬಿಟ್ಟಿದ್ದಾರೆ.
ವಿವಿಯ ಉನ್ನತ ಮೂಲಗಳು ಹೇಳುವ ಮಾಹಿತಿ ಪ್ರಕಾರ, ರಾತ್ರಿಯವರೆಗೂ ವೆಬ್‍ಸೈಟ್ ತಾಣ ಸುಸ್ಥಿತಿಯಲ್ಲಿತ್ತು. ಸೋಮವಾರ ಬೆಳಿಗ್ಗೆ ವೆಬ್‍ಸೈಟ್ ಹ್ಯಾಕ್ ಆಗಿರುವ ಸಂಗತಿ ಕುವೆಂಪು ವಿವಿ ಕುಲಪತಿ ಪ್ರೋ. ಜೋಗನ್ ಶಂಕರ್ ರವರಿಗೆ ಗೊತ್ತಾಗಿದೆ. ತಕ್ಷಣವೇ ಅವರು ವಿವಿಯ ತಂತ್ರಜ್ಞರ ತಂಡಕ್ಕೆ ಮಾಹಿತಿ ರವಾನಿಸಿದ್ದಾರೆ.
ತಂತ್ರಜ್ಞರ ತಂಡವು ಸತತ ಅರ್ಧ ಗಂಟೆಯ ಕಾರ್ಯಾಚರಣೆ ನಡೆಸಿ, ಹ್ಯಾಕ್ ಆಗಿದ್ದ ವೆಬ್‍ಸೈಟ್‍ನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ವೆಬ್‍ಸೈಟ್ ತಾಣವನ್ನು ಎಂದಿನಂತೆ ಸಾರ್ವಜನಿಕರಿಗೆ ಸೇವೆಗೆ ಲಭ್ಯವಾಗುವಂತೆ ಮಾಡುವಲ್ಲಿ ಸಫಲವಾಗಿದ್ದಾರೆ.
ಸಂದೇಶ ಹಾಕಿದರು: ವೆಬ್‍ಸೈಟ್ ತಾಣ ಹ್ಯಾಕ್ ಮಾಡಿದ ದುಷ್ಕರ್ಮಿಗಳು, ಸಂದೇಶವೊಂದನ್ನು ಹರಿಬಿಟ್ಟಿದ್ದರು. 'ನೀವು ಎಷ್ಟೇ ಸೆಕ್ಯೂರಿಟಿ ಮಾಡಿದರೂ ಅದನ್ನು ನಾವು ಧಿಕ್ಕಿರಿಸಬಲ್ಲೆವು. ಪಾಕಿಸ್ತಾನ ಜಿಂದಾಬಾದ್...' ಎಂಬ ಸಂದೇಶ ಹಾಕಿದ್ದರು. ಇದನ್ನು ವಿವಿ ತಂತ್ರಜ್ಞರ ತಂಡವು ತೆಗೆದು ಹಾಕಿದೆ ಎಂದು ತಿಳಿದುಬಂದಿದೆ.
ಬೇಡಿಕೆಯಿಲ್ಲ: ಸಾಮಾನ್ಯವಾಗಿ ವೆಬ್‍ಸೈಟ್ ಹ್ಯಾಕ್ ಮಾಡುವ ದುಷ್ಕರ್ಮಿಗಳು, ಹ್ಯಾಕ್‍ನಿಂದ ಮುಕ್ತಗೊಳಿಸಲು ಹಣಕ್ಕೆ ಡಿಮ್ಯಾಂಡ್ ಮಾಡುತ್ತಾರೆ. ಇಲ್ಲವೇ ವೆಬ್ ತಾಣದಲ್ಲಿರುವ ಮಾಹಿತಿ ಕದಿಯುತ್ತಾರೆ. ಜೊತೆಗೆ ಸಾಫ್ಟ್‍ವೇರ್ ಗಳನ್ನು ಹಾಳುಗೆಡವುತ್ತಾರೆ. ಆದರೆ ಹ್ಯಾಕರ್ ಗಳು ಈ ರೀತಿಯ ಕುಕೃತ್ಯಗಳನ್ನು ಮಾಡಿಲ್ಲ ಎನ್ನಲಾಗಿದೆ.
'ಸೈಬರ್ ಕ್ರೈಂ ಪೊಲೀಸರಿಗೆ ದೂರು' : ಕುವೆಂಪು ವಿವಿ ಕುಲಪತಿ ಪ್ರೋ. ಜೋಗನ್ ಶಂಕರ್
'ವಿಶ್ವವಿದ್ಯಾನಿಲಯದ ವೆಬ್‍ಸೈಟ್ ಹ್ಯಾಕ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ವೆಬ್‍ತಾಣ ಹ್ಯಾಕ್ ಆಗಿರುವ ಮಾಹಿತಿ ದೊರಕುತ್ತಿದ್ದಂತೆ ವಿವಿಯ ತಂತ್ರಜ್ಞರು ಸಮಸ್ಯೆ ಪರಿಹರಿಸಿದ್ದಾರೆ. ಸುಸ್ಥಿತಿಗೆ ತಂದಿದ್ದಾರೆ. ಹ್ಯಾಕರ್ ಗಳು ಯಾರೆಂಬ ಮಾಹಿತಿಯಿಲ್ಲ. ಪೊಲೀಸರ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಬೇಕಾಗಿದೆ. ಹ್ಯಾಕರ್ ಗಳು ಹಣಕ್ಕೆ ಡಿಮ್ಯಾಂಡ್ ಇಟ್ಟಿಲ್ಲ. ವೆಬ್‍ತಾಣದ ಮಾಹಿತಿ ಕಳವು ಮಾಡಿಲ್ಲ. ಜೊತೆಗೆ ಸಾಫ್ಟ್‍ವೇರ್ ಅನ್ನು ಹಾಳುಗೆಡವಿಲ್ಲ' ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೋ. ಜೋಗನ್ ಶಂಕರ್ ಸ್ಪಷ್ಟಪಡಿಸಿದ್ದಾರೆ.