ಕಲಬುರ್ಗಿ: ಮಕ್ಕಳ ಕಳ್ಳನೆಂದು ಸಿಖ್ ವ್ಯಕ್ತಿಗೆ ಥಳಿಸಿದ ಗುಂಪು
ಕಲಬುರ್ಗಿ, ಮೇ 28: ವಾಟ್ಸ್‌ಆ್ಯಪ್‌ನಲ್ಲಿ ಮಕ್ಕಳ ಕಳ್ಳರ ಬಗ್ಗೆ ಹರಿದಾಡುತ್ತಿರುವ ಸಂದೇಶಗಳಿಂದ ಭಯಭೀತರಾಗಿರುವ ಜನರು ಸಂಶಯದ ಮಿತಿಯೊಳಗೆ ಬರುವ ಎಲ್ಲರ ಮೇಲೂ ದಾಳಿ ನಡೆಸುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ವರದಿಯಾಗುತ್ತಿದೆ. ಮಕ್ಕಳ ಕಳ್ಳನೆಂದು ಅನುಮಾನಗೊಂಡು ಸಿಖ್ ವ್ಯಕ್ತಿಯ ಮೇಲೆ 30-40 ಜನರ ಗುಂಪು ಹಲ್ಲೆ ನಡೆಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿರುವುದಾಗಿ ವರದಿಗಳು ತಿಳಿಸಿವೆ.
ಅಲ್ವಾರ್ ಸಿಂಗ್ ಸಿಖ್ಖರ ಧಾರ್ಮಿಕ ಚಿಹ್ನೆ ಕಿರ್ಪನ್ (ಚೂರಿ) ಅನ್ನು ಹೊಂದಿದ್ದುದೇ ಜನರು ಆತ ಮಕ್ಕಳ ಕಳ್ಳ ಎಂದು ತಪ್ಪು ತಿಳಿಯಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಕೊಡ್ಲದ ಮಾರುಕಟ್ಟೆಯಲ್ಲಿ ತಿರುಗಾಡುತ್ತಿದ್ದ ಅಲ್ವಾರ್ ಸಿಂಗ್ ಬಳಿ ಚೂರಿ ಇರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸಿಂಗ್, ಅದು ಸಿಖ್ ಧರ್ಮದ ಚಿಹ್ನೆ ಎಂದು ತಿಳಿಸಿದರೂ ಸಮಾಧಾನಗೊಳ್ಳದ 30-40 ಜನರ ಗುಂಪು ಸಿಂಗ್‌ನ ಪೇಟವನ್ನು ತೆಗೆದು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಅಲ್ವಾರ್ ಸಿಂಗ್‌ಗೆ ಕಲಬುರ್ಗಿಯ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಚಾಲಕನ ಉದ್ಯೋಗ ದೊರಕಿದ್ದು, ಮೂರು ದಿನಗಳ ಹಿಂದೆಯಷ್ಟೇ ನಗರಕ್ಕೆ ಆಗಮಿಸಿದ್ದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 326 ಮತ್ತು ದಂಗೆ ಸಂಬಂಧಿ ಇತರ ಕಾಯ್ದೆಗಳಡಿ ದೂರು ದಾಖಲಿಸಿರುವ ಸೆಡಮ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಕ್ಕಳ ಕಳ್ಳರ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಸುದ್ದಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ 26ರ ಹರೆಯದ ರಾಜಸ್ಥಾನಿ ಕಾರ್ಮಿಕನ ಮೇಲೆ ಸಾಮೂಹಿಕ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಬೆಂಗಳೂರಿನ ಅಂಜನಪ್ಪ ಗಾರ್ಡನ್‌ನಲ್ಲಿ ಮಕ್ಕಳ ಕಳ್ಳರೆಂದು ಆರೋಪಿಸಿ ಮಂಜುನಾಥ್ ಮತ್ತು ರಾಜ್‌ಕುಮಾರ್ ಎಂಬವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಸದ್ಯ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಮಕ್ಕಳ ಕಳ್ಳರ ವಿಡಿಯೊ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಘಟನೆಯಾಗಿದ್ದು ಕರ್ನಾಟಕದಲ್ಲಿ ಅಂಥ ಯಾವ ಘಟನೆಗಳೂ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.