×
Ad

ಚಿಕ್ಕಮಗಳೂರು: ರಾಜ್ಯ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

Update: 2018-05-28 21:53 IST

ಚಿಕ್ಕಮಗಳೂರು, ಮೇ 28: ಸಿಎಂ ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ವಿಫಲರಾಗಿದ್ದಾರೆಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಕರೆ ನೀಡಿದ್ದ ಬಂದ್‍ಗೆ ಜಿಲ್ಲೆಯ ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಮತ್ತೆ ಕೆಲವೆಡೆ ಮಿಶ್ರಪ್ರತಿಕ್ರೆಯೆ ವ್ಯಕ್ತವಾಗಿದೆ.

ಮೂಡಿಗೆರೆ, ಕೊಪ್ಪ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟುಗಳು ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಬಂದ್ ಆಗಿದ್ದರೆ, ಶೃಂಗೇರಿ, ಕಡೂರು, ಹಾಗೂ ತರೀಕೆರೆ ತಾಲೂಕಿನಾದ್ಯಂತ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಈ ತಾಲೂಕು ವ್ಯಾಪ್ತಿಯಲ್ಲಿ ಆಟೊ, ಬಸ್ ಸಂಚಾರ, ಜನ ಸಂಚಾರ ಎಂದಿನಂತಿತ್ತು. 

ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆಯಿಂದ ಬೆರಳೆಣಿಕೆಯ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಉಳಿದಂತೆ ಹೊಟೇಲ್‍ಗಳು, ದಿನಸಿ, ತರಕಾರಿ ಅಂಗಡಿಗಳು, ಕ್ಲಿನಿಕ್‍ಗಳು, ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವಯ.  ಸರಕಾರಿ, ಖಾಸಗಿ ಬಸ್‍ಗಳ ಸೇವೆ ಮಾಮೂಲಿನಂತೆ ಇತ್ತು. ಆಟೊ, ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. 

ನಗರದ ಎಂ.ಜಿ.ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಐ.ಜಿ ರಸ್ತೆಗಳಲ್ಲಿ ಕೆಲ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದರೆ, ಇನ್ನು ಕೆಲವು ತೆರೆದಿದ್ದ ದೃಶ್ಯಗಳು ಕಂಡು ಬಂದವು. ಬೇರೆ ಬೇರೆ ಜಿಲ್ಲೆಗಳಿಂದ ಸಂಪರ್ಕ ಕಲ್ಪಿಸುವ ಕೆಎಸ್ಸಾರ್ಟಿಸಿ ಬಸ್‍ಗಳು ನಗರದಲ್ಲಿ ಎಂದಿನಂತೆ ಸಂಚರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ನಗರದ ಸರಕಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕೊಂಚ ವಿರಳವಾಗಿತ್ತು. ನಗರದ ಸರಕಾರ ಜಿಲ್ಲಾ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಮೆಡಿಕಲ್ ಶಾಪ್, ಶಾಲೆ, ಬ್ಯಾಂಕ್‍ಗಳು ಹಾಗೂ ಸರಕಾರಿ ಕಚೇರಿಗಳ ಕಾರ್ಯವೈಖರಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

ಕೊಪ್ಪ ಮತ್ತು ಮೂಡಿಗೆರೆ ಪಟ್ಟಣಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಬೆಳಗ್ಗೆಯಿಂದಲೇ ಪಟ್ಟಣದ ಅಂಗಡಿ ಮುಂಗ್ಗಟ್ಟು, ಶಾಲಾ-ಕಾಲೇಜು, ಆಟೊ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸರಕಾರ ಬಸ್‍ಗಳ ಸೇವೆ ಇತ್ತಾದರೂ ಜನರ ಸಂಖ್ಯೆ ಕಡಿಮೆ ಇತ್ತು. ಕೊಪ್ಪ, ಮೂಡಿಗೆರೆ, ತರೀಕೆರೆ, ಕಡೂರು, ಶೃಂಗೇರಿ ಹಾಗೂ ಎನ್.ಆರ್.ಪುರ ತಾಲೂಕು ಕೇಂದ್ರಗಳಲ್ಲಿ ಬಿಜೆಪಿ ಹಾಗೂ ರೈತ ಮೋರ್ಚಾದ ಕಾರ್ಯಕರ್ತರು ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಇನ್ನು ಜಿಲ್ಲೆಯ ಏಳು ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಜನಜೀವನ ಸಾಮಾನ್ಯ ವಾಗಿತ್ತು. ಬಂದ್‍ನ ಬಿಸಿ ಗ್ರಾಮೀಣ ಭಾಗದ ಜನರನ್ನು ತಟ್ಟಲಿಲ್ಲ. 

ಸಿಟಿ ರವಿ ನೇತೃತ್ವದಲ್ಲಿ ಪ್ರತಿಭಟನೆ: ಚಿಕ್ಕಮಗಳೂರು ನಗರದಲ್ಲಿ ಸಿ.ಟಿ.ರವಿ ನೇತೃತ್ವದಲ್ಲಿ ರೈತ ಮೋರ್ಚಾದ ಕಾರ್ಯಕರ್ತರು ಹನುಮಂತಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಾಲ ಮನ್ನಾ ಮಾಡಲು ಸರಕಾರವನ್ನು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಕರೆ ನೀಡಿದ್ದ ರಾಜ್ಯ ಬಂದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರದ ಹನುಮಂತಪ್ಪ ವೃತ್ತ, ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅನೇಕ ಕಡೆಗಳಲ್ಲಿ ಡಿಆರ್ ತುಕಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಮುಂಜಾನೆ ನಗರದ ಹನುಂತಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಾರಿಗೆ ಬಸ್ ಸಂಚಾರ ತಡೆಯಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಎಂದಿನಂತಿದ್ದ ಜನ ಸಂಚಾರ: ಚಿಕ್ಕಮಗಳೂರು ನಗರದಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಹೊರತುಪಡಿಸಿ ಉಳಿದಂತೆ ಆಟೋ, ಟ್ಯಾಕ್ಸಿ, ಬಸ್ ಸಂಚಾರ ಎಂದಿನಂತೆ ಸುಗಮವಾಗಿ ಸಂಚರಿಸಿದ್ದರಿಂದ ಜನ ಸಂಚಾರ ಎಂದಿನಂತೆ ಇತ್ತು. ಖಾಸಗಿ ವಾಹನಗಳ ಸಂಚಾರವು ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು. ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸಿದ್ದರಿಂದ ಆಸ್ಪತ್ರೆಯಲ್ಲಿ ಜನ ಸಂದಣಿ ಎಂದಿನಂತೆ ಕಂಡು ಬಂತು.

ಪ್ರವಾಸಿಗರ ಸಂಖ್ಯೆ ವಿರಳ: ಚಿಕ್ಕಮಗಳೂರು ಜಿಲ್ಲೆ ಪ್ರವಾಸಿ ಕೇಂದ್ರವಾಗಿರುವುದರಿಂದ ಜಿಲ್ಲಾ ಕೇಂದ್ರಕ್ಕೆ ಪ್ರವಾಸಿಗರ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಸಾಮಾನ್ಯ. ಬಂದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಪ್ರವಾಸಿಗರ ಸಂಖ್ಯೆ ಎಂದಿಗಿಂತ ವಿರಳವಾಗಿತ್ತು. ಬಸ್ ಸಂಚಾರ ಸಮರ್ಪಕವಾಗಿರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಪ್ರವಾಸಿಗರು ತಮ್ಮ ಪ್ರವಾಸವನ್ನು ಮೊಟಕುಗೊಳಿಸಿರುವಂತೆ ಭಾಸವಾಗುತ್ತಿತ್ತು. ಶನಿವಾರ ಹಾಗೂ ರವಿವಾರದ ರಜಾ ದಿನಗಳೂ ಸೇರಿದಂತೆ ಪ್ರತಿದಿನ ಪ್ರವಾಸಿಗರ ವಾಹನಗಳಿಂದ ತುಂಬಿರುತ್ತಿದ್ದ ನಗರದ ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ಸೋಮವಾರ ವಾಹನದಟ್ಟಣೆ ಹೆಚ್ಚು ಕಂಡು ಬರಲಿಲ್ಲ. 

ಒಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಾಲ ಮನ್ನಾ ಮಾಡಬೇಕೆಂದು ಬಿಜೆಪಿ ರಾಜ್ಯಾದ್ಯಂತ ಕರೆ ನೀಡಿದ್ದ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಾಲಾ ಮಕ್ಕಳಿಗೆ ತಟ್ಟಿದ ಬಂದ್ ಬಿಸಿ: ರಾಜ್ಯದಾದ್ಯಂತ ಮೇ 28ರಿಂದ ಶಾಲಾ ಕಾಲೇಜು ಆರಂಭವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಾಗೂ ನಗರದ ಶಾಲಾ ಕಾಲೇಜುಗಳಿಗೆ ಹೊರಟಿದ್ದ ವಿದ್ಯಾರ್ಥಿಗಳಿಗೆ ಬಂದ್‍ನ ಬಿಸಿ ತಟ್ಟಿದ್ದು ಕಂಡು ಬಂತು. ಬಂದ್ ಹಿನ್ನೆಲೆಯಲ್ಲಿ ಸೋಮವಾರ ಸರಕಾರಿ, ಖಾಸಗಿ ಬಸ್‍ಗಳ ಓಡಾಟ ಇರುತ್ತದೋ ಇಲ್ಲವೋ ಎಂಬ ಗೊಂದಲಕ್ಕೆ ಬಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹಿಂದುಮುಂದು ನೋಡುವಂತಾಗಿತ್ತು. ಈ ಕಾರಣಕ್ಕೆ ನಗರದ ಕೆಲ ಸರಕಾರಿ, ಖಾಸಗಿ ಶಾಲೆಗಳಲ್ಲಿ ಪ್ರಥಮ ದಿನ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತಾದರೂ ಶಾಲೆಗಳು ಜಿಲ್ಲಾದ್ಯಂತ ಎಂದಿನಂತೆ ನಡೆದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News