×
Ad

ಎಚ್.ಡಿ.ಕೆ ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ: ಜೆಡಿಎಸ್ ಮುಖಂಡ ಎಂ.ಡಿ ದೇವೆಗೌಡ

Update: 2018-05-28 22:09 IST

ತರೀಕೆರೆ, ಮೇ 28: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಕಳೆದರೂ ತಾವು ಕೊಟ್ಟ ಮಾತನ್ನು ಈಡೇರಿಸಲಾಗದಿದ್ದರೂ ಕೇವಲ ಅಧಿಕಾರ ವಹಿಸಿಕೊಂಡ ಮೂರು ದಿನಗಳಲ್ಲೇ ಕೊಟ್ಟ ಮಾತನ್ನು ಈಡೇರಿಸುವಂತೆ ಇತರರಿಗೆ ಒತ್ತಾಯಿಸಲು ಬಿ.ಜೆ.ಪಿ. ಪಕ್ಷದ ರಾಜ್ಯ ನಾಯಕರಿಗೆ ನೈತಿಕತೆ ಇದೆಯೇ? ಎಂದು ತಾಲೂಕು ಜೆ.ಡಿ.ಎಸ್. ಮಹಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ದೇವೆಗೌಡ ಪ್ರಶ್ನಿಸಿದ್ದಾರೆ. 

ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿ.ಜೆ.ಪಿ.ಯ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಹಾಕುವುದಾಗಿ ಹಾಗೂ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಕೊಟ್ಟ ಮಾತನ್ನು ನಾಲ್ಕು ವರ್ಷ ಕಳೆದರೂ ಸಹ ಈಡೇರಿಸಲಾಗದಂತಹ ಸ್ಥಿತಿಯಲ್ಲಿದ್ದು, ಆದರೆ ಕೇವಲ ಅಧಿಕಾರ ವಹಿಸಿಕೊಂಡ 3 ದಿನಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ರಾಜ್ಯ ಬಿ.ಜೆ.ಪಿ ನಾಯಕರಿಗೆ ನೈತಿಕತೆ ಏನಾದರೂ ಇದೆಯೇ ಎಂದು ತಿರುಗೇಟು ನೀಡಿದರು. 

ರಾಜ್ಯ ಸರಕಾರ 2 ಪಕ್ಷಗಳ ಮೈತ್ರಿಯೊಂದಿಗೆ ಅಧಿಕಾರಕ್ಕೆ ಬಂದಿದ್ದು, ಅದರ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ. ಪಾಲುದಾರ ಪಕ್ಷದವರೊಂದಿಗೆ ಚರ್ಚಿಸಿ ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ತಕ್ಷಣ ಸಾಲ ಮಾನ್ನ ಮಾಡುವಂತೆ ಒತ್ತಾಯಿಸಿ ರಾಜ್ಯ ಬಂದ್ ಕರೆ ನೀಡಿರುವುದು ರಾಜ್ಯ ಬಿ.ಜೆ.ಪಿ. ನಾಯಕರು ಯಾವ ಮಟ್ಟದಲ್ಲಿದ್ದಾರೆ ಎಂಬುದನ್ನು  ತೋರಿಸುತ್ತದೆ ಎಂದು ಅವರು ವ್ಯಂಗವಾಡಿದರು. 

ಮುಖ್ಯ ಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿಯವರ ಬಗ್ಗೆ ಮಾತನಾಡುವಾಗ ಅನುಭವಿಗಳಾದ ಬಿ.ಎಸ್.ವೈ ರವರು ತಮ್ಮ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಚ್ಯುತಿ ತರದಂತೆ ನಡೆದುಕೊಳ್ಳಬೇಕು. ಹಾಗೂ ಶೋಭಾ ಕರಂದ್ಲಾಜೆ ರವರು ರಾಜ್ಯ ಮುಖ್ಯ ಮಂತ್ರಿಯವರ ಬಗ್ಗೆ  ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ ಅವರು ಮೊದಲು ತಮ್ಮ ಪಕ್ಷದ ಕೇಂದ್ರ ಸರ್ಕಾರದ ಮೇಲೆ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಒತ್ತಾಯ ಪಡಿಸಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ರಾಜ್ಯ ಸರ್ಕಾರಕ್ಕೆ ಸಾಲ ಮನ್ನಾ ಮಾಡುವ ಬಗ್ಗೆ ಮುಖ್ಯ ಮಂತ್ರಿಯವರು ಕ್ರಮ ಕೈಗೊಳ್ಳಲಿದ್ದು, ಕೊಟ್ಟ ಮಾತಿಗೆ ತಪ್ಪಲಾರರು. ಈ ಬಗ್ಗೆ ಬಿ.ಜೆ.ಪಿ. ರಾಜ್ಯ ನಾಯಕರು ಗಮನದಲ್ಲಿಟ್ಟುಕೊಳ್ಲಬೇಕು. ತಮ್ಮ ಕೈಲಾಗದನ್ನು ಮರೆ ಮಾಚಿ ಇನ್ನೊಬ್ಬರನ್ನು ಒತ್ತಾಯಿಸುವುದು ನ್ಯಾಯ ಸಮತ್ತವಲ್ಲ ಎಂದು ಅವರು ಪತ್ರಿಕೆಯಲ್ಲಿ ತಿಳಿಸಿದ್ದಾರೆ.  



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News