×
Ad

ದಾವಣಗೆರೆ: ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

Update: 2018-05-28 22:31 IST

ದಾವಣಗೆರೆ,ಮೇ.28: ರೈತರ ಸಾಲಮನ್ನಾಗೆ ಆಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಲವೆಡೆ ಅಂಗಡಿ, ಹೊಟೇಲ್‍ಗಳು ಮುಚ್ಚಲಾಗಿತ್ತು. ಅದರೆ ಇನ್ನು ಹಲವಡೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು ಕಂಡು ಬಂತು. ಅಲ್ಲದೆ ಎಂದಿನಂತೆ  ವಾಹನಗಳು ಸಂಚರಿಸಿದವು. ಬಿಜೆಪಿ ಕಾರ್ಯಕರ್ತರು ಒತ್ತಾಯಪೂರ್ವಕವಾಗಿ ಕೆಲವೆಡೆ ಬಂದ್ ಮಾಡಿಸಿದ್ದು, ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ, ಪೊಲೀಸರೊಂದಿಗೆ ಮಾತಿನ ಚಕಮಕಿ, ಹಲವರ ಬಂಧನ, ಬಿಡುಗಡೆ ಮಾಡಲಾಯಿತು.

ನಗರದಲ್ಲಿ ವಾಹನ ಸಂಚಾರ, ಶಾಲಾ ಕಾಲೇಜು, ಕಚೇರಿ, ಬ್ಯಾಂಕ್, ವ್ಯಾಪಾರ ವಹಿವಾಟು ಎಂದಿನಂತೆಯೇ ನಡೆದವು. ಬೆಳಗ್ಗೆ 8 ಗಂಟೆಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಬೈಕ್ ಮೂಲಕ ತೆರಳಿ ಅಂಗಡಿ ಮಾಲೀಕರಿಗೆ ಬಂದ್‍ಗೆ ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ನಗರದ ಗಾಂಧಿವೃತ್ತದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು. ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳಿ ಬಂದ್‍ಗೆ ಬೆಂಬಲಿಸುವಂತೆ ಮನವಿ ಮಾಡಿ, ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೆಲವೆಡೆ ಕಾರ್ಯಕರ್ತರು ಒತ್ತಾಯವಾಗಿ ಅಂಗಡಿ ಮುಚ್ಚಿಸಲು ಯತ್ನಿಸಿದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಂದ್ ಮಾಡುವಂತೆ ಸಾರ್ವಜನಿಕರನ್ನು ಒತ್ತಾಯ ಮಾಡಬಾರದು ಎಂದು ಪೊಲೀಸರು ಕಾರ್ಯಕರ್ತರಿಗೆ ಸೂಚನೆ ನೀಡಿದರು. ಬೆಳಗ್ಗೆ 12 ಗಂಟೆ ವೇಳೆಯಲ್ಲಿ ಜನಜೀವನ ಎಂದಿನಂತೆ ಕಂಡುಬಂದಿತು. ಬಹುತೇಕ ಎಲ್ಲೆಡೆ ಜನಸಂಚಾರ ಎಂದಿನಂತೆ ಸಾಗಿತ್ತು. ಒಟ್ಟಾರೆ ರಾಜ್ಯ ಬಂದ್‍ಗೆ ದಾವಣಗೆರೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲೆಡೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. 

ಸಂಸದರು, ಶಾಸಕರ ಬಂಧನ, ಬಿಡುಗಡೆ
ರೈತರ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಬಂದ್ ಬೆಂಬಲಿಸಿ ದಾವಣಗೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ ಸೇರಿದಂತೆ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News