ಮತದಾರರಿಗೆ ಕೊಟ್ಟ ಭರವಸೆಯಂತೆ ಕೆಲಸ ಮಾಡಿ ತೋರಿಸುತ್ತೇನೆ: ಶಾಸಕ ಎನ್.ಮಹೇಶ್
ಕೊಳ್ಳೇಗಾಲ,ಮೇ.28: ನಾನು ಈಗ ಬಿ.ಎಸ್.ಪಿ ಪಕ್ಷವೊಂದಕ್ಕೆ ಶಾಸಕನಲ್ಲ, ಎಲ್ಲಾ ಸಮುದಾಯಕ್ಕೆ ಸೇರಿದ ಕೊಳ್ಳೇಗಾಲ ಕ್ಷೇತ್ರದ ಶಾಸಕನಾಗಿದ್ದೇನೆ. ನಾನು ಮಂತ್ರಿ ಆದರೂ, ಕೊಳ್ಳೇಗಾಲದಲ್ಲಿದ್ದು ಕೊಂಡು ಜನರ ಅಹವಾಲುಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಕೊಳ್ಳೇಗಾಲದ ಕ್ಷೇತ್ರದ ನೂತನ ಶಾಸಕ ಎನ್.ಮಹೇಶ್‍ರವರು ತಿಳಿಸಿದ್ದಾರೆ.
ಇಂದು ಕೊಳ್ಳೇಗಾಲ ಪಟ್ಟಣದ ಅವರ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರಲ್ಲದೆ, ನಾನು ಗೆದ್ದ ನಂತರ ಅನಿವಾರ್ಯವಾಗಿ ಬೆಂಗಳೂರಿನಲ್ಲೆ ಇರಬೇಕಾಯಿತು. ಬಹುಮತ ಸಾಬೀತು ಪಡಿಸುವ ವಿಚಾರದಲ್ಲಿ ನಾನು ಕಾಂಗ್ರೇಸ್ ಹಾಗೂ ಜೆಡಿಎಸ್ ಶಾಸಕರ ಜೊತೆ ಇದ್ದು ಕುಮಾರಸ್ವಾಮಿಯವರ ಬಹುಮತ ಸಾಬೀತು ಪಡಿಸುವ ಸಲುವಾಗಿ ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಉಳಿಯಬೇಕಾಯಿತು. ಆದರೆ ಗೆದ್ದ ನಂತರ ಮಹೇಶ್ ಕೊಳ್ಳೇಗಾಲಕ್ಕೆ ಬಂದಿಲ್ಲ ಎಂಬ ಉಹಾಪೋಹ ವದಂತಿಗೆ ಯಾರು ಮಾನ್ಯತೆ ಕೊಡಬಾರದು ಎಂದರು.
ನಾನು ಚುನಾವಣೆ ಪೂರ್ವದಲ್ಲಿ ಮತದಾರರಿಗೆ ಕೊಟ್ಟ ಭರವಸೆಯಂತೆ ಕೆಲಸ ಮಾಡಿ ತೋರಿಸುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಬೆಂಬಲ ಇದೆ
ಇದೇ ಸಂಧರ್ಭದಲ್ಲಿ ರೈತಸಾಲ ಮನ್ನಾ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಏನು ? ಎಂಬ ಪ್ರಶ್ನೆಗೆ ರೈತರ ಸಾಲ ಮನ್ನಾ ವಿಚಾರದಲ್ಲಿ ನನ್ನ ಸಹಮತ ಇದೆ ಕುಮಾರುಸ್ವಾಮಿಯವರು ಹಾಗೂ ಕಾನೂನು ತಜ್ಞರ ಜೊತೆ ಈಗಾಗಲೇ ಚರ್ಚಿಸಿ ಒಂದು ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಆದರೆ ಬಿಜೆಪಿಯವರ ಅತುರವಾದ ನಿಲುವು ಸರಿಯಾಗಿಲ್ಲ ಎಂದು ಉತ್ತರಿಸಿದರು.
ಮಂತ್ರಿ ಸ್ಥಾನ ಗ್ಯಾರಟಿ ?
ಈಗಾಗಾಲೇ ಮಂತ್ರಿ ಮಂಡಲ ರಚನೆ ವಿಚಾರ ಕಾಂಗ್ರೆಸ್ ಜೆ.ಡಿ.ಎಸ್. ವರಿಷ್ಠರು ತೀರ್ಮಾನಿಸಿದ್ದಾರೆ. 22 ಸ್ಧಾನ ಕಾಂಗ್ರೆಸ್ ಹಾಗೂ 12 ಸ್ಧಾನ ಜೆಡಿಎಸ್ ಗೆ ಎಂದು ತೀರ್ಮಾನವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಸ್ಧಾನ ಕುಮಾರಸ್ವಾಮಿಗೆ ಲಭಿಸಿರುವುದರಿಂದ 10 ಜೆ.ಡಿ.ಎಸ್ ಹಾಗೂ ಚುನಾವಣೆ ಪೂರ್ವದಲ್ಲಿ ಹೊಂದಾಣಿಕೆಯಂತೆ ಬಿಎಸ್‍ಪಿ ಯಿಂದ ಗೆದ್ದಿರುವ ನನಗೆ ಒಂದು ಸ್ಥಾನ ಸಿಗುತ್ತದೆ ಎಂಬ ಆಶಾ ಭಾವನೆ ಹೊಂದಿದ್ದೇನೆ. ನಿನ್ನೆ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ದೇವೇಗೌಡರು ಅಭಯ ನೀಡಿದ್ದಾರೆ. ಇದರಿಂದ ನನಗೆ ಮಂತ್ರಿ ಸ್ಧಾನ ಖಚಿತ ಎಂಬ ಭಾವನೆ ಹೊಂದಿದ್ದೇನೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಈ ವೇಳೆ ಜೆ.ಡಿ.ಎಸ್. ಮುಖಂಡ ಸಿದ್ದಯ್ಯನಪುರ ಚಾಮರಾಜು, ಆನಂದಜ್ಯೋತಿ ಕಾಲೋನಿ ಚಾಮರಾಜು, ನಗರಸಭೆ ಸದಸ್ಯರಾದ ಕೃಷ್ಣಯ್ಯ, ರಂಗಸ್ವಾಮಿ, ರಾಮಕೃಷ್ಣ, ಟೌನ್ ಅಧ್ಯಕ್ಷ ಜಕಾವುಲ್ಲಾ, ಮಾಜಿ ತಾ.ಪಂ ಸದಸ್ಯ ಬಸವಣ್ಣ, ಮುಖಂಡರಾದ ಸೋಮಣ್ಣ ಉಪ್ಪಾರ, ವೀರಶೈವ ಮುಖಂಡಗಳಾದ ತಿಮ್ಮರಾಜಿಪುರ ಪುಟ್ಟಣ್ಣ, ವೀರಮಾದು, ಇಂದ್ರೇಶ್, ಉದಯಕುಮಾರ್, ಜಗದೀಶ್, ರಾಜೇಂದ್ರ, ಕೆಂಪರಾಜು, ಸುರೇಶ್, ಜಾಕಿಸುರಿ, ಸೇರಿದಂತೆ ಅನೇಕರು ಉಪಸ್ಧಿತರಿದ್ದರು.