×
Ad

ಮಂಡ್ಯದಲ್ಲಿ ಬಂದ್ ಸಂಪೂರ್ಣ ವಿಫಲ: ಬಲವಂತ ಬಂದ್‍ಗೆ ಮುಂದಾದ ಬಿಜೆಪಿ ಕಾರ್ಯಕರ್ತರ ಬಂಧನ

Update: 2018-05-28 23:07 IST

ಮಂಡ್ಯ, ಮೇ 28: ಭರವಸೆ ನೀಡಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ರೈತರ ಸಾಲಮನ್ನಾ ಮಾಡಿಲ್ಲವೆಂದು ರಾಜ್ಯವ್ಯಾಪಿ ಕರೆ ನೀಡಿದ್ದ ಬಂದ್‍ಗೆ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗದೆ ಸಂಪೂರ್ಣ ವಿಫಲವಾಯಿತು.

ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೊಟೇಲ್, ಸಿನಿಮಾ, ಪೆಟ್ರೋಲ್ ಬಂದ್, ಶಾಲಾ-ಕಾಲೇಜು ಸೇರಿದಂತೆ ಸರಕಾರಿ, ಅರೆ ಸರಕಾರಿ, ಖಾಸಗಿ ಉದ್ಯಮಗಳು ಕಾರ್ಯನಿರ್ವಹಿಸಿದವು. ಬಸ್ ಮತ್ತಿತರ ವಾಹನ ಸಂಚಾರ ಎಂದಿನಂತೆ ಇತ್ತು.

ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಲು ಮುಂದಾದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಜಿ.ಪಂ ಸದಸ್ಯ ಎನ್.ಶಿವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ನಗರಾಧ್ಯಕ್ಷ ಬೇಕ್ರಿ ಅರವಿಂದ್, ಮಲ್ಲಿಕಾರ್ಜುನ್, ಶಿವು, ಶಿವಕುಮಾರ್ ಆರಾಧ್ಯ, ಹನಿಯಂಬಾಡಿ ನಾಗರಾಜು ಸೇರಿದಂತೆ ಹಲವರು ಬಂಧಿತರಾಗಿದ್ದರು.

ಮದ್ದೂರು ವರದಿ: ಪಟ್ಟಣದಲ್ಲಿ ಎಂದಿನಂತೆ ಎಲ್ಲಾ ಅಂಗಡಿಗಳನ್ನು ತೆರೆಯಲಾಗಿತ್ತು. ವಾಹನ ಸಂಚಾರ ಎಂದಿನಂತೆ ಇತ್ತು. ಬಿಜೆಪಿ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಬೈಕ್ ರ್ಯಾಲಿ ಮೂಲಕ ಆಗಮಿಸಿ ಕೆಲವು ಅಂಗಡಿಗಳನ್ನು ಮುಚ್ಚಿಸಿದರು. ಆದರೆ, ಅವರ ಅತ್ತ ಹೋಗುತ್ತಿದ್ದಂತೆ ಇತ್ತ ವರ್ತಕರು ಅಂಗಡಿ ತೆರೆದು ತಮ್ಮ ವಹಿವಾಟು ಮುಂದುವರಿಸಿದರು.  

ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಎಂ.ಸತೀಶ್, ಜಿಲ್ಲಾ ಕಾರ್ಯದರ್ಶಿ ರೂಪ, ಯುವ ಮೋರ್ಚಾ ಉಪಾಧ್ಯಕ್ಷ ಗುರುಮಲ್ಲೇಶ್, ಕ್ಷೇತ್ರ ಪ್ರದಾನ ಕಾರ್ಯದರ್ಶಿ ಎಂ.ಸಿ.ಸಿದ್ದು, ಜಿ.ಸಿ.ಮಹೇಂದ್ರ, ಚಾಮನಹಳ್ಳಿ ಮಹೇಂದ್ರ, ಕೆಂಪುಬೋರಯ್ಯ, ಸ್ವಾಮಿ ಇತರರು ಭಾಗವಹಿಸಿದ್ದರು.

ಪಾಂಡವಪುರ ವರದಿ: ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಜಮಾವಣೆಗೊಂಡು ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ರಾಜಕುಮಾರ್ ವೃತ್ತದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲು ಬಲವಂತ ಮಾಡಿದ ಎಚ್.ಎನ್.ಮಂಜುನಾಥ್, ಜಿಲ್ಲಾ ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸನಾಯಕ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹಿರೇಮರಳಿ ಸಂದೇಶ್ ಸೇರಿದಂತೆ 12ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.

ತಾಲೂಕು ರೈತ ಮೋರ್ಚಾ ಅಧ್ಯಕ್ಷ ನೀಲನಹಳ್ಳಿ ಧನಂಜಯ, ಮುಖಂಡರಾದ ಎಚ್.ಕೆ.ದೊರೆಸ್ವಾಮಿ, ಎಚ್.ಶ್ರೀನಿವಾಸ್, ಬೀರಶೆಟ್ಟಹಳ್ಳಿ ಮಧು, ಶ್ರೀನಿವಾಸನಾಯಕ, ಬಾಲು, ವೀರಭದ್ರಸ್ವಾಮಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News