ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಸೈನಿಕ ಶಾಲೆಗಳ ಪಾತ್ರ ಹಿರಿದು : ಬ್ರಿಗೇಡಿಯರ್ ಎಂ.ಎ.ದೇವಯ್ಯ ಅಭಿಪ್ರಾಯ
ಮಡಿಕೇರಿ ಮೇ 29 : ರಾಷ್ಟ್ರೀಯ ರಕ್ಷಣಾ ಇಲಾಖೆಗೆ ಮತ್ತು ದೇಶ ಕಟ್ಟುವ ಮಹತ್ವದ ಕಾರ್ಯಕ್ಕೆ ಸಮರ್ಥ ಅಧಿಕಾರಿಗಳನ್ನು ಸೃಷ್ಟಿಸುವಲ್ಲಿ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಬ್ರಿಗೇಡಿಯರ್ ಎಂ.ಎ.ದೇವಯ್ಯ ವಿ.ಎಸ್.ಎಂ. ಅಭಿಪ್ರಾಯಪಟ್ಟಿದ್ದಾರೆ. ಕೂಡಿಗೆಯ ಸೈನಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೈನಿಕ ಶಾಲಾ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಆದರೆ ವಿದ್ಯಾರ್ಥಿಗಳಲ್ಲಿ ರಕ್ಷಣಾ ಇಲಾಖೆಗೆ ಸೇರುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಬ್ರಿಗೇಡಿಯರ್ ಎಂ.ಎ.ದೇವಯ್ಯ ಶಿಕ್ಷಕರಾದ ತಾವು ಅವರಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಶಿಕ್ಷಕರು ಮಕ್ಕಳ ಅಭಿರುಚಿಗಳನ್ನು ಅರ್ಥಮಾಡಿಕೊಂಡು ಪಾಠ ಮಾಡಬೇಕೆಂದು ತಿಳಿಸಿದ ಬ್ರಿಗೇಡಿಯರ್ ಸುಭದ್ರ ದೇಶ ಕಟ್ಟುವಲ್ಲಿ ಶಿಕ್ಷಕರ ಕೊಡುಗೆಗಳು ಮಹತ್ವದ್ದು ಎಂದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾರತೀಯ ನೌಕಾದಳದ ಕ್ಯಾಪ್ಟನ್ ಯೋಗೇಶ್, ವಿದ್ಯಾರ್ಥಿಗಳು ಮಾತುಗಾರಿಕೆಯ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದರು.
ಆಂಧ್ರಪ್ರದೇಶದ ಕೊರಕೊಂಡ ಸೈನಿಕ ಶಾಲೆಯ ನಿವೃತ್ತ ಇಂಗ್ಲೀಷ್ ಶಿಕ್ಷಕರಾದ ಜೇಸುದಾಸ್ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ತಿಳಿಸಿದರು. ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್.ಆರ್.ಲಾಲ್ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗುಂಪು ಚರ್ಚೆಗಳನ್ನು ಹೆಚ್ಚಾಗಿ ಏರ್ಪಡಿಸಬೇಕು. ಇದು ಸರ್ವಿಸ್ ಸೆಲೆಕ್ಷನ್ ಬೋರ್ಡ್‍ನಲ್ಲಿ ಹೆಚ್ಚು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮಲ್ಲಿ ಶಾಲೆಯ ನೂತನ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಶೀಮಾ ತ್ರಿಪಾಠಿ, ಶಾಲೆಯ ಶಿಕ್ಷಕ ಮತ್ತು ಆಡಳಿತ ವರ್ಗ, ವಿವಿಧ ಸೈನಿಕ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕಕರು ಪಾಲ್ಗೊಂಡಿದ್ದರು.