ಮೈತ್ರಿ ಸರಕಾರ ಶೀಘ್ರ ಪತನಗೊಳ್ಳಲಿದೆ: ಸಂಸದೆ ಶೋಭಾ ಕರಂದ್ಲಾಜೆ

Update: 2018-05-29 12:43 GMT

ಚಿಕ್ಕಮಗಳೂರು, ಮೇ 29: ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಸರಕಾರ ರಚನೆ ಪರವಾಗಿ ಮತಚಲಾಯಿಸಿದ್ದಾರೆ. ಆದರೆ ಕಾಂಗ್ರೆಸ್ ಜೆಡಿಎಸ್ ಸಂವಿಧಾನವನ್ನು ಧಿಕ್ಕರಿಸಿ ಪ್ರಜಾತಂತ್ರ ವ್ಯವಸ್ಥೆಯ ವಿರುದ್ಧವಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚನೆ ಮಾಡಿವೆ. ಈ ಮೈತ್ರಿ ಸರಕಾರದ ಭವಿಷ್ಯ ಕಡಿಮೆ ಇದ್ದು, ಶೀಘ್ರ ಸರಕಾರ ಪತನಗೊಳ್ಳಲಿದೆ. ಈ ಎರಡೂ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಚಿಕ್ಕಮಗಳೂರು ನಗರದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರಕಾರ ದುರಾಡಳಿತಕ್ಕೆ ಹೆಸರಾಗಿತ್ತು. ಕೋಮುವಾದದ ರಾಜಕೀಯವನ್ನೇ 5 ವರ್ಷಗಳಲ್ಲಿ ಮಾಡಿತ್ತು. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಜನತೆ ಬಿಜೆಪಿಯನ್ನು ಅತ್ಯಂತ ದೊಡ್ಡ ಪಕ್ಷವಾಗಿ ಬಿಜೆಪಿಯನ್ನು ಚುನಾಯಿಸಿದ್ದರು. ಪ್ರಜಾತಂತ್ರ ವಿರೋಧಿಯಾಗಿ ಕಾಂಗ್ರೆಸ್ ಚುನಾವಣೆ ಬಳಿಕ ನಡೆದುಕೊಂಡಿದೆ. ಜನ ಕೊಟ್ಟ ತೀರ್ಪನ್ನು ಧಿಕ್ಕರಿಸಿದ ಕಾಂಗ್ರೆಸ್ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಕಸರತ್ತು ಮಾಡಿದೆ. ಮುಂದಿನ ಚುನಾವಣೆಯಲ್ಲಿ ಈ ಪಕ್ಷಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದೆ ಶೋಭಾ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಕೆಲವು ಸ್ಥಾನಗಳ ಹಿನ್ನಡೆಯಿಂದಾಗಿ ಸರಕಾರ ನಡೆಸುವ ಅವಕಾಶ ಬಿಜೆಪಿ ಕೈ ತಪ್ಪಿದ್ದು, ಮತ್ತೆ ವಿರೋಧ ಪಕ್ಷದಲ್ಲಿ ಕುಳಿತು ಜನರ ಪರವಾಗಿ ಕೆಲಸ ಮಾಡುವ ಸಂದರ್ಭ ಬಂದಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಅಧಿಕಾರ ನೀಡಲಿದ್ದಾರೆಂದು ಅವರು ಹೇಳಿದರು ರಾಜ್ಯದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ರಾಜ್ಯದ ಬಿಜೆಪಿ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ ಫಲವಾಗಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದರು.

ಮೈತ್ರಿ ಸರಕಾರಕ್ಕೆ ನಿರ್ದಿಷ್ಟ ಭವಿಷ್ಯವಿಲ್ಲ. ಸರಕಾರ ಯಾವಾಗ ಬಿದ್ದು ಹೋಗುತ್ತದೋ ಗೊತ್ತಿಲ್ಲ. ಸಂಪುಟ ವಿಸ್ತರಣೆ ವೇಳೆ ಫಲವತ್ತಾದ ಖಾತೆಗಳಿಗಾಗಿ ಎರಡೂ ಪಕ್ಷಗಳಲ್ಲಿ ಖಾತೆ ಖ್ಯತೆ ಶುರುವಾಗಿದೆ. ಲಾಭವಿರುವ ಖಾತೆಗಳಿಗಾಗಿ ಕಚ್ಚಾಟವಾಗುತ್ತಿದೆ. ಮೈತ್ರಿ ಸರಕಾರದಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದ ಅವರು, 2004ರಲ್ಲಿ ಸಜ್ಜನ ರಾಜಕಾರಣಿ ಧರಮ್ ಸಿಂಗ್ ಅವರಿಗೆ ಕೈ ಕೊಟ್ಟು ಬಿಜೆಪಿ ಮನೆ ಬಾಗಿಲಿಗೆ ಅಧಿಕಾರಕ್ಕಾಗಿ ಓಡಿ ಬಂದಿದ್ದ ಕುಮಾರಸ್ವಾಮಿ ಈ ಬಾರಿ ಕಾಂಗ್ರೆಸ್ ನಾಯಕಯ ಮನೆ ಬಾಗಿಲಿಗೆ ಓಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಈ ಅಪವಿತ್ರ ಮೈತ್ರಿ ಏರ್ಪಟಿದ್ದು, ಈ ಮೈತ್ರಿ ಸರಕಾರದ ಆಯುಷ್ಯ ಹೆಚ್ಚಿನ ದಿನಗಳ ಕಾಲ ಉಳಿಯುವುದಿಲ್ಲ ಎಂದರು.

ರಾಜರಾಜೇಶ್ವರಿ ಕ್ಷೇತ್ರದ ಚುನಾವಣೆ ಮುಗಿದಿದ್ದು, ಮತ ಎಣಿಕೆ ಬಳಿಕ ಬಿಜೆಪಿ ಅಭ್ಯರ್ಥಿಯೇ ಗೆಲ್ಲಲಿದ್ದಾರೆ. ಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಘಪರಿವಾರದ ಅಭ್ಯರ್ಥಿ ಸ್ಪರ್ಧಿಸಿದ್ದು ಅವರ ಗೆಲುವು ಖಚಿತ ಎಂದ ಅವರು,  ಬಾಕಿ ಇರುವ ಜಮಖಂಡಿ, ರಾಮನಗರ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. 

ಬೆಳಗಾವಿ ವಿಭಾಗ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಿಕ್ಷಕರ ಮತ್ತು ಪದವೀಧರರ ಚುನಾವಣೆ ನಡೆಯುತ್ತಿದೆ. ಕಳೆದ ಮೂರು ದಶಕಗಳಿಂದ ರಾಜ್ಯದ ಶಿಕ್ಷಕರು, ಪದವೀಧರರು ಬಿಜೆಪಿಯೊಂದಿಗಿದ್ದಾರೆ. ಈ ಭಾಗದ ಕ್ಷೇತ್ರದಲ್ಲೂ ನಿರಂತರವಾಗಿ ಡಿ.ಎಚ್.ಶಂಕರಮೂರ್ತಿ  ಶಿಕ್ಷಕರು, ಪದವೀಧರರು ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸುತ್ತಿದ್ದಾರೆ. ಈ ಬಾರಿಯೂ ರಾಜ್ಯದ 6 ಶಿಕ್ಷಕರ ಪದವೀಧರ ಕ್ಷೇತ್ರಗಳ ಪೈಕಿ 6ರಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಈ ಸಂಬಂಧ ವ್ಯಾಪಕ ಪ್ರಚಾರ ನಡೆಸಲಾಗಿದ್ದು, ಅಭ್ಯರ್ಥಿಗಳ ಪರವಾಗಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಟಿ.ರವಿ, ತರೀಕೆರೆ ಶಾಸಕ ಸುರೇಶ್, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಜತೆಗಿದ್ದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದೆ ಶೋಭಾ ಕರಂದ್ಲಾಜೆ, ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷ ನೀಡಿದ ಜವಬ್ದಾರಿಯನ್ನು ತಾನು ಸದ್ಯ ನಿರ್ವಹಿಸುತ್ತಿದ್ದೇನೆ. ಪಕ್ಷ ಎಲ್ಲಿ ಸೂಚಿಸುತ್ತದೋ ಅಲ್ಲಿ ಸ್ಪರ್ಧಿಸುವುದು ನನ್ನ ಕರ್ತವ್ಯ ಎಂದರು.

ಜೆಡಿಎಸ್ ವರಿಷ್ಠರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿತ್ತು. ಈಗ ಅದನ್ನು ಕೇಳಿದರೇ, ತನಗೆ ಜನತೆ ಸಿಎಂ ಮಾಡಿಲ್ಲ, ಕಾಂಗ್ರೆಸ್ ಪಕ್ಷದ ನಾಯಕರಿಂದಾಗಿ ಸಿಎಂ ಆಗಿದ್ದೇನೆ, ಕಾಂಗ್ರೆಸ್‍ನ ಮುಲಾಜಿನಲ್ಲಿದ್ದೇನೆ ಎಂದು ಜಾರಿಕೊಳ್ಳುತ್ತಿದ್ದಾರೆ. ಈ ಮೂಲಕ ಸಿಎಂ ಕುಮಾರಸ್ವಾಮಿ ನಾಡಿನ ಮತದಾರರನ್ನು ಅವಮಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News