ಸಂಗೀತ ವಿ.ವಿ ಗಳು ಒಳ್ಳೆಯ ಸಂಗೀತಗಾರರನ್ನು ನೀಡಲು ಮುಂದಾಗಿ: ಪಂಡಿತ್ ಡಾ.ರಾಜೀವ್ ತಾರಾನಾಥ್
ಮೈಸೂರು,ಮೇ.29: ಸಂಗೀತ ವಿಶ್ವವಿದ್ಯಾನಿಲಯಗಳು ಸಂಗೀತ, ಸಂಸ್ಕೃತಿಯನ್ನು ಉಳಿಸಿಕೊಂಡು ಒಳ್ಳೆಯ ಸಂಗೀತಗಾರರನ್ನು ನೀಡಲು ಮುಂದಾಗಿ ಎಂದು ಖ್ಯಾತ ಸರೋದ್ ವಾದಕ ಪಂಡಿತ್ ಡಾ.ರಾಜೀವ್ ತಾರಾನಾಥ್ ಕರೆ ನೀಡಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಅವರ ಸ್ವಗೃಹದಲ್ಲಿ ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ಈ ಸಾಲಿನ “ಗೌರವ ನಾಡೋಜ” ಪದವಿಯನ್ನು ಸ್ವೀಕರಿಸಿ ಮಾತನಾಡಿದರು.
ನಮ್ಮ ಮಂದಿಯೇ ನನಗೆ ಸನ್ಮಾನ ಮಾಡಿರುವುದು ನನಗೆ ಖುಷಿ ನೀಡಿದೆ. ನನ್ನ ಮಂದಿ ನನಗೆ ಹಾರ ಹಾಕಿ ಅಸಲಿ ವಿಗ್ರಹ ನೀಡಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ ಅವರು, ಇಂದೂಧರ ನಿರೋಡಿ ಅವರಿಗೂ ನಾಡೋಜ ಬರಬೇಕಿತ್ತಲ್ಲ. ಯಾಕೆ ಬಂದಿಲ್ಲ, ಅವರು ಕನ್ನಡ ನಾಡಿಗಾಗಿ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ ಎಂದರು. ಸಂಗೀತ ಕಲಿಸಲು ಗುರುಕುಲ ಎಂದು ಹೆಸರಿಟ್ಟು ರೊಕ್ಕ ಕೊಡೋದು, ರೊಕ್ಕ ತಗೋಳೋದು ಆರಂಭವಾಗಿದೆ. ವಿಶ್ವವಿದ್ಯಾನಿಲಯದೊಳಗೆ ಸಂಗೀತ ವಿಭಾಗ. ಅಲ್ಲಿಂದ ಯಾರು ಸಂಗೀತಗಾರರು ಹೊರ ಬಂದಿದಾರೆ, ಬಾಯಿ ತೆರೆದರೆ ಗೋವಿಂದ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದ ವಿಶ್ವವಿದ್ಯಾನಿಲಯಗಳಿಂದ ಭಾಷಾ ಜ್ಞಾನ, ಇತಿಹಾಸ ಜ್ಞಾನಗಳೆಲ್ಲ ಕೆಳಗೆ ಧುಮುಕಿ ಬಿಟ್ಟಿವೆ. ಜಗತ್ತಿನಲ್ಲಿ ಕೇಳುವ ಹಾಗಿರುವ ಸಂಗೀತ ಕಲಿಸುವ ಕೆಲಸವಾಗಬೇಕು. ಈ ದೇಶದ ಸಂಗೀತವನ್ನು ಉಳಿಸಿಕೊಳ್ಳಬೇಕು. ಆ ಕುರಿತು ಯಾರಿಗೂ ಕಾಳಜಿಯಿಲ್ಲ. ಎಲ್ಲರಿಗೂ ರೊಕ್ಕದ ಮೇಲೆಯೇ ಗಮನ ಎಂದು ಬೇಸರ ವ್ಯಕ್ತಪಡಿಸಿದರು. ಸಂಗೀತವನ್ನು ವಿದ್ವಾಂಸರಿಂದ ಪಡೆದು ಹೇಗೆ ಬೆಳೆಯಬೇಕು ಎಂಬುದರ ಕುರಿತು ಕಳಕಳಿಯಿಟ್ಟು ಬೆಳೆಯಬೇಕು. ಸಂಗೀತ ವಿಶ್ವವಿದ್ಯಾನಿಲಯಗಳು ಹೊಳೆಯುವ ಅಂದರೆ ಸಂಸ್ಕೃತಿಯನ್ನು, ಸಂಗೀತವನ್ನು ಉಳಿಸುವ ಬೆಳೆಸುವ ಸಂಗೀತಗಾರರನ್ನು ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಂಪಿ ವಿವಿಯ ಕುಲಪತಿ ಡಾ.ಮಲ್ಲಿಕಾ ಎಸ್. ಘಂಟಿ ಪ್ರಶಸ್ತಿ ಪ್ರದಾನಿಸಿದರು. ಹಂಪಿ ವಿವಿ ಕಲುಸಚಿವ ಡಾ.ಡಿ.ಪಾಂಡುರಂಗಬಾಬು, ಅಧ್ಯಯನಾಂಗ ನಿರ್ದೇಶಕ ಡಾ.ಶಿವಾನಂದ ಎಸ್.ವಿರಕ್ತಮಠ, ಕವಿ ಡಾ.ಸಿದ್ದಲಿಂಗಯ್ಯ, ಲಲಿತಕಲೆಗಳ ನಿಕಾಯ್ ಡೀನ್ ಡಾ.ಅಶೋಕ್ ಕುಮಾರ್ ರಂಜೇರೆ, ಸಮಾಜ ವಿಜ್ಞಾನಗಳ ನಿಕಾಯ್ ಡೀನ್ ಡಾ.ಮಂಜುನಾಥ್ ಬೇವಿನಕಟ್ಟಿ ಹಾಗೂ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು, ಮೈಸೂರಿನ ಸಂಗೀತ ಪ್ರೇಮಿಗಳು, ರಾಜೀವ್ ತಾರಾನಾಥ್ ಶಿಷ್ಯವೃಂದದವರು ಉಪಸ್ಥಿತರಿದ್ದರು.