ಕಾಂಗ್ರೆಸ್ ಹಗರಣ ಮುಚ್ಚಿಹಾಕಲು ಜೆಡಿಎಸ್‍ಅನ್ನು ಗುರಾಣಿಯನ್ನಾಗಿ ಬಳಸಿಕೊಂಡಿದೆ: ಸಿ.ಟಿ.ರವಿ

Update: 2018-05-29 14:24 GMT

ಚಿಕ್ಕಮಗಳೂರು, ಮೇ 29: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರದಾಸೆಯಿಂದ ಅಪವಿತ್ರ ಮೈತ್ರಿ ಏರ್ಪಡಿಸಿಕೊಂಡು ಸರಕಾರ ರಚಿಸಿವೆ. ಈ ಪಕ್ಷಗಳ ಮುಖಂಡರು, ವರಿಷ್ಠರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಪರಸ್ಪರ ವಿಶ್ವಾಸವಿಲ್ಲದ ಮೈತ್ರ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಭವಿಷ್ಯ ನುಡಿದಿದ್ದಾರೆ.

ಚುನಾವಣೆಯಲ್ಲಿ ಗೆದ್ದು ಪುನಃ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳವಾರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ದೇಶಾದ್ಯಂತ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಈ ಪಕ್ಷದ ಮೇಲೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ. ಇದಕ್ಕೆ ಕಾಂಗ್ರೆಸ್ ದೇಶದಲ್ಲಿ 60 ವರ್ಷ ದುರಾಡಳಿತ ನಡೆಸಿರುವುದೇ ಆಗಿದೆ. ಈ ಕಾರಣಕ್ಕೆ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆಕಿಂತಹ ಪರಿಸ್ಥಿತಿಯಲ್ಲಿ ಕನಾಟಕ ರಾಜ್ಯ ಕಾಮಗ್ರೆಸ್ ಪಕ್ಷದ ಪಾಲಿಗೆ ಎಟಿಎಂನಂತಿತ್ತು. ಆದರೆ ಪಕ್ಷದ ವರಿಷ್ಠರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದುರಾಳಿತದಿಂದ ಕಾಂಗ್ರೆಸ್ ರಾಜ್ಯದಲ್ಲೂ ಅಧೋಗತಿಗೆ ಸರಿದಂತಾಗಿದೆ ಎಂದು ಟೀಕಿಸಿದರು.

 ಮೈತ್ರಿ ಸರಕಾರದಲ್ಲಿ ಪ್ರಬಲ ಖಾತೆಗಳು ತಮಗೇ  ಬೇಕು ಎಂದು ಎರಡೂ ಪಕ್ಷಗಳು  ಹೋರಾಟ ನಡೆಸುತ್ತಿವೆ ಎಂದು ಛೇಡಿಸಿದ ರವಿ, ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ನಡೆಸಿದಾಗ ದೊಡ್ಡ ಮಟ್ಟದಲ್ಲಿ ಹಗರಣಗಳನ್ನು ನಡೆಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹಗರಣಗಳನ್ನು ಬಯಲಿಗೆಳೆದು ಕಾಂಗ್ರೆಸ್ಸಿಗರನ್ನು ಜೈಲಿಗಟ್ಟಬಹುದು ಎಂಬ ಭಯದಿಂದ ತರಾತುರಿಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ತಮ್ಮ ಹಗರಣ ತಡೆಯಲು ಜೆಡಿಎಸ್‍ವನ್ನು ಗುರಾಣಿ ರೀತಿಯಲ್ಲಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಇದು ಜನಾದೇಶದ ಸರಕಾರವಲ್ಲ, ಕಾಂಗ್ರೆಸ್‍ನವರ ಹಂಗಿನಲ್ಲಿದ್ದೇವೆ ಎಂದು ಹೇಳಿದ್ದಾರೆ. ಹಂಗಿನಲ್ಲಿರುವ ಈ ಸರಕಾರದಿಂದ ಯಾವ ಅಭಿವೃದ್ಧಿ ಕೆಲಸ ಬಯಸಲು ಸಾಧ್ಯ ಎಂದು ರವಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿವೇಣುಗೋಪಾಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮದ್ ಅನ್ವರ್, ನಗರ ಪ್ರಧಾನ ಕಾರ್ಯದರ್ಶಿ ಮಧುಕುಮಾರ್ ರಾಜ್ ಅರಸ್, ವಿ.ಎಚ್.ಪಿ.ಮುಖಂಡ ಯೋಗೀಶ್ ರಾಜ್ ಅರಸ್ ಇತರರು ಜತೆಗಿದ್ದರು

ಹೋರಾಟ ಮುಂದುವರಿಯುತ್ತದೆ

ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ದತ್ತಪೀಠದ ಹೋರಾಟ ಮುಂದುವರಿಯಲಿದೆ. ಈ ಹಿಂದಿನ ರಾಜ್ಯ ಸರಕಾರ ದತ್ತಪೀಠ ವಿವಾದ ಬಗೆಹರಿಸದೆ ನ್ಯಾಯಮೂರ್ತಿ ನಾಗ್ ಮೋಹನ್ ದಾಸ್ ಸಮಿತಿಯನ್ನು ರಚನೆ ಮಾಡುವ ಮೂಲಕ ಈ ವಿವಾದವನ್ನು ಜೀವಂತವಾಗಿ ಇಡುವ ಕೆಲಸ ಮಾಡಿದೆ. ಈ ವರದಿಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ನ್ಯಾಯ ಸಿಗುವವರೆಗೂ ಈ ಬಗ್ಗೆ ಹೋರಾಟ ಮುಂದುವರಿಸಲಾಗುವುದು.

- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News