ಉತ್ತಮ ಆಡಳಿತಕ್ಕಾಗಿ ಜೆಡಿಎಸ್‌ನೊಂದಿಗೆ ಮೈತ್ರಿ: ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿಕೆ
ತುಮಕೂರು, ಮೇ. 29: ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡುವ ದೃಷ್ಟಿಯಿಂದ ಸಂವಿಧಾನ ಬದ್ದವಾಗಿ ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಉಪಮುಖ್ಯಮಂತ್ರಿ ಆದ ನಂತರ ಮಂಗಳವಾರ ಮೊದಲ ಭಾರಿಗೆ ಭೇಟಿ ನೀಡಿ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಆಶೀರ್ವಾದ ಪಡೆದು, ಮಾಧ್ಯಮದವರೊಂದಿಗೆ ಮಾತನಾಡಿದರು.
2008 ರಿಂದ 2013ರವರಗೆ ಉತ್ತಮ ಆಡಳಿತ ನೀಡಲು ವಿಫಲವಾಗಿದ್ದ ಬಿಜೆಪಿ ಸರಕಾರವನ್ನು ದೂರವಿಟ್ಟು, 2013ರಿಂದ 5 ವರ್ಷಗಳ ಕಾಲ ರೈತರ, ಕಾರ್ಮಿಕರ, ಬಡವರ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ನಂ.1 ಸ್ಥಾನಗಳಿಸಿದ್ದ ಕಾಂಗ್ರೆಸ್ ಜೆಡಿಎಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಬಗ್ಗೆ ಕೇಳಿ ಬರುವ ಟೀಕೆಗಳಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದರು.
ಬಿಜೆಪಿಯೊಂದಿಗೆ ಕಾಂಗ್ರೆಸ್‌ನ ಯಾವ ಶಾಸಕರೂ ಸಂಪರ್ಕದಲ್ಲಿಲ್ಲ. ಇದು ಸತ್ಯಕ್ಕೆ ದೂರವಾದದ್ದು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವುದು ಸಹಜ. ಇದಕ್ಕೆ ಅನಗತ್ಯ ಅರ್ಥ ಕಲ್ಪಸುವ ಅಗತ್ಯ ಇಲ್ಲ ಎಂದು ನುಡಿದರು.
ತುಮಕೂರು ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಸೇರಿದಂತೆ ಇನ್ನಿತರ ನೀರಾವರಿ ಯೋಜನೆಗಳ ಸೌಲಭ್ಯವನ್ನು ಕಲ್ಪಿಸಲು ಯೋಜನೆ ಹಾಕಿಕೊಳ್ಳಲಾಗುವುದು. ಸ್ಮಾರ್ಟ್‌ಸಿಟಿ, ಬಿದರಕಟ್ಟೆಯಲ್ಲಿ ತುಮಕೂರು ವಿವಿಗೆ ಮೂಲ ಸವಲತ್ತು ಕಲ್ಪಿಸುವುದು ಸೇರಿದಂತೆ ಮತ್ತಷ್ಟು ಅನುದಾನ ಬಿಡುಗಡೆ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಕಾರ್ಯಯೋಜನೆ ಕೈಗೊಳ್ಳಲಾಗುವುದು ಎಂದರು.
ಆಶೀರ್ವಾದ ಪಡೆದ ನಂತರ ಮಠದಲ್ಲಿ ಪರಮೇಶ್ವರ್ ಪತ್ನಿ ಕನ್ನಿಕಾಪರಮೇಶ್ವರ್‌ರೊಂದಿಗೆ ಊಟ ಸವಿದರು.ಈ ವೇಳೆ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಡಾ.ರಫೀಕ್ ಅಹಮದ್ ಇತರರು ಇದ್ದರು.