ಅಭಯ ನೀಡದ ನಿರ್ಭಯಾ

Update: 2018-05-30 07:10 GMT

ಯುಪಿಎ ಸರಕಾರದ ಅವಧಿಯಲ್ಲಿ ನಡೆದ ‘ನಿರ್ಭಯಾ ಪ್ರಕರಣ’ ಈ ದೇಶದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳು ಮತ್ತು ಅವುಗಳ ಸಂತ್ರಸ್ತರ ಕಡೆಗೆ ವ್ಯವಸ್ಥೆಯ ಗಮನವನ್ನು ಸೆಳೆಯಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಕರಣ ಚರ್ಚೆಯಾದ ಪರಿಣಾಮವಾಗಿ ಸರಕಾರ ಅತ್ಯಾಚಾರ ಸಂತ್ರಸ್ತರಿಗಾಗಿ ಕಾನೂನುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿತು. ನಿರ್ಭಯಾ ಪ್ರಕರಣಕ್ಕೆ ದೇಶ ಸ್ಪಂದಿಸಿದ ರೀತಿಯನ್ನು ಗಮನಿಸಿದರೆ, ಇಂದು ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬೇಕಾಗಿತ್ತು. ದುರದೃಷ್ಟವಶಾತ್ ಎನ್‌ಡಿಎ ಸರಕಾರದ ನಾಲ್ಕು ವರ್ಷಗಳಲ್ಲಿ ಅತ್ಯಾಚಾರಗಳೇ ಮಾಧ್ಯಮಗಳಲ್ಲಿ ಅತಿ ಹೆಚ್ಚು ಸುದ್ದಿಯಾದವು. ವಿಪರ್ಯಾಸವೆಂದರೆ ಅತ್ಯಾಚಾರ ಪ್ರಕರಣಗಳಲ್ಲಿ, ಅದನ್ನು ಮುಚ್ಚಿ ಹಾಕುವಲ್ಲಿ ಸರಕಾರದೊಳಗಿರುವವರೇ ನಾಯಕರೇ ಗುರುತಿಸಿಕೊಳ್ಳತೊಡಗಿದರು.ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ದೂರು ದಾಖಲಿಸುವುದೇ ಕಷ್ಟವಾಗಿರುವ ಸನ್ನಿವೇಶದಲ್ಲಿ, ಆಕೆ ಸರಕಾರದಿಂದ ಸೂಕ್ತ ಪರಿಹಾರವನ್ನು ನಿರೀಕ್ಷಿಸುವುದು ಸಾಧ್ಯವಾಗುವ ಮಾತೇ?

ಈ ದೇಶದಲ್ಲಿ ಆತ್ಯಾಚಾರ ಸಂತ್ರಸ್ತರು ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರು ಒಂದೇ ದೋಣಿಯ ಪಯಣಿಗರು. ಇವು ಹೆಣ್ಣಿನ ವ್ಯಕ್ತಿತ್ವದ ಮೇಲೆ ನಡೆಸುವ ದಾಳಿಗಳು. ಅತ್ಯಾಚಾರ ಸಂತ್ರಸ್ತೆ ಮಾನಸಿಕವಾಗಿ ಜರ್ಜರಿತಳಾದರೆ, ಆ್ಯಸಿಡ್ ದಾಳಿಗೊಳಗಾದ ಹೆಣ್ಣು ತನ್ನ ವಿರೂಪಗೊಂಡ ಮುಖದ ಜೊತೆಗೆ ಬದುಕನ್ನು ಎದುರಿಸಬೇಕಾಗುತ್ತದೆ. ಆ್ಯಸಿಡ್ ದಾಳಿ ದೈಹಿಕ ದಾಳಿಯೇ ಆಗಿದ್ದರೂ, ಅದು ಆಕೆಯನ್ನು ಮಾನಸಿಕವಾಗಿ ತೀವ್ರವಾಗಿ ಕುಗ್ಗಿಸುತ್ತದೆ. ರೂಪವೂ ಮನುಷ್ಯನ ವ್ಯಕ್ತಿತ್ವದ ಭಾಗ ಎಂದು ಸಮಾಜ ನಂಬಿರುವ ಕಾರಣಕ್ಕಾಗಿ ಆಕೆ ಉಳಿದವರಿಂದ ಅಸೃಶ್ಯಳಾಗಿ ಬದುಕಬೇಕಾಗುತ್ತದೆ. ವಿಪರ್ಯಾಸವೆಂದರೆ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ ಶಿಕ್ಷೆಯಿಂದ ಪಾರಾಗುತ್ತಾರೆ. ಅತ್ಯಾಚಾರ ಮತ್ತು ಆ್ಯಸಿಡ್ ದಾಳಿಗೊಳಗಾದವರನ್ನು ವಿಚಾರಣೆಯ ಸಂದರ್ಭದಲ್ಲಿ ನಡೆಸುವ ಕ್ರಮವೇ ಇದಕ್ಕೆ ಕಾರಣವಾಗಿರಬಹುದು.

ಅತ್ಯಾಚಾರಕ್ಕೊಳಗಾದ ಸಂತ್ರಸ್ತರು ಆರೋಪಿಗಳ ವಿರುದ್ಧ ಬಹಿರಂಗ ಹೋರಾಟಕ್ಕಿಳಿಯಲು ಹಿಂಜರಿಯುತ್ತಾರೆ. ಸಮಾಜ ಆರೋಪಿಯನ್ನು ತುಚ್ಛವಾಗಿ ನೋಡುವ ಬದಲು ಸಂತ್ರಸ್ತರನ್ನೇ ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಈ ಕಾರಣಕ್ಕಾಗಿಯೇ ಅವರಲ್ಲಿ ಆತ್ಮವಿಶ್ವಾಸ ತುಂಬಲು ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ನೀಡಲು ಕಾನೂನು ಸೂಚನೆ ನೀಡುತ್ತದೆ. 2013ರಲ್ಲಿ ನಿರ್ಭಯಾ ನಿಧಿಯನ್ನು ಇದಕ್ಕಾಗಿಯೇ ಸ್ಥಾಪಿಸಲಾಗಿದೆ. ಕಾನೂನು ಹೋರಾಟದಲ್ಲಿ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆಯೋ ಇಲ್ಲವೋ ಆದರೆ, ಅವರ ಪುನರ್ವಸತಿಗಾಗಿ ಸರಕಾರ ತಕ್ಷಣ ಹಣವನ್ನು ಬಿಡುಗಡೆ ಮಾಡಬೇಕು. ದುರಂತವೆಂದರೆ ನಿರ್ಭಯಾ ನಿಧಿಯಿಂದ ಈವರೆಗೆ 9 ರಾಜ್ಯಗಳ ಕೇವಲ 123 ಸಂತ್ರಸ್ತರು ಮಾತ್ರ ಪರಿಹಾರವನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಪ್ರಕಾರ ದೇಶಾದ್ಯಂತ ಕೇವಲ 510 ಲೈಂಗಿಕ ದೌರ್ಜನ್ಯ ಸಂತ್ರಸ್ತರು ಮಾತ್ರ ಫಲಾನುಭವಿಗಳಾಗಿದ್ದಾರೆ. ಅಂದರೆ ಕಳೆದ ಐದು ವರ್ಷಗಳಲ್ಲಿ ಈ ದೇಶದಲ್ಲಿ ನಡೆದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬರೇ 500ರಷ್ಟು ಮಾತ್ರವೇ ಆಗಿವೆ ಎಂದು ಸರಕಾರ ಹೇಳುತ್ತದೆಯೇ? ಹಾಗಾದರೆ ಉಳಿದ ಸಂತ್ರಸ್ತರಿಗೆ ಪರಿಹಾರವನ್ನು ನೀಡುವಲ್ಲಿ ಸರಕಾರ ಯಾಕೆ ವಿಫಲವಾಗಿದೆ?

ಲೈಂಗಿಕ ಹಿಂಸಾಚಾರ ಅಥವಾ ಆ್ಯಸಿಡ್ ದಾಳಿಗಳ ಘಟನೆಗಳು ಸಂಭವಿಸಿದಾಗ ಈ ಪ್ರಕರಣಗಳನ್ನು ಕಾನೂನು ಸೇವಾ ಪ್ರಾಧಿಕಾರಗಳು ತಾವೇ ಸ್ವಯಂ ಪರಿಗಣನೆಗೆ ತೆಗೆದುಕೊಂಡು ಸಂತ್ರಸ್ತರಿಗೆ ಪರಿಹಾರ ವಿತರಿಸಬಹುದು ಎಂದು ಸುಪ್ರೀಂಕೋರ್ಟ್ ಈಗಾಗಲೇ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳಿಗೂ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುವಂತೆ ಕನಿಷ್ಠ ಐದು ಲಕ್ಷ ರೂಪಾಯಿಯಿಂದ ಗರಿಷ್ಠ 10 ಲಕ್ಷದವರೆಗೆ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಅತ್ಯಾಚಾರ-ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ ಗರಿಷ್ಠ 10 ಲಕ್ಷ ರೂಪಾಯಿ ಪರಿಹಾರವಿದ್ದರೆ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕ ಕಿರುಕುಳ, ಈ ಸಂದರ್ಭದಲ್ಲಿ ಶೇ. 80ರಷ್ಟು ಶಾಶ್ವತ ವೈಕಲ್ಯಕ್ಕೆ ಒಳಗಾದರೆ ಮತ್ತು ತೀವ್ರವಾದ ದೈಹಿಕ ಊನಗಳಿಗೆ ಗುರಿಯಾದರೆ ಕನಿಷ್ಟ ರೂ. 5 ಲಕ್ಷಕ್ಕೆ ಮೇಲ್ಪಟ್ಟು ಪರಿಹಾರ ನೀಡಬೇಕು ಎಂದೂ ನ್ಯಾಯಾಲಯ ನಿಗದಿಪಡಿಸಿದೆ. ಆ್ಯಸಿಡ್ ದಾಳಿಗಳ ಪ್ರಕರಣಗಳಲ್ಲಿ ಘಟನೆಯ ತೀವ್ರತೆಗೆ ಅನುಸಾರವಾಗಿ ಐದು ಲಕ್ಷದಿಂದ ಆರು ಲಕ್ಷ ರೂ.ಗಳವರೆಗೆ ಪರಿಹಾರ ನೀಡಬೇಕು ಎಂದೂ ಆದೇಶಿಸಲಾಗಿದೆ. ಈ ಪರಿಹಾರಕ್ಕೂ ಕೋರ್ಟ್ ವಿಚಾರಣೆಗೂ ಯಾವುದೇ ಸಂಬಂಧವಿಲ್ಲ. ಘಟನೆ ಸಂಭವಿಸಿದ 15 ದಿನಗಳೊಳಗೆ ಒಂದು ಲಕ್ಷ ರೂ. ಪಾವತಿ ಮಾಡುವುದಲ್ಲದೆ ಆನಂತರದ ಎರಡು ತಿಂಗಳಲ್ಲಿ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದೂ ಆದೇಶಿಸಲಾಗಿದೆ. ಎರಡೂ ಬಗೆಯ ಪ್ರಕರಣಗಳಲ್ಲಿ ಬಾಧಿತರು ಅಪ್ರಾಪ್ತ ವಯಸ್ಕರಾಗಿದ್ದರೆ ಪರಿಹಾರದ ಮೊತ್ತ ಶೇ. 50 ಅಧಿಕ ನೀಡಬೇಕಾಗುತ್ತದೆ.

ಅತ್ಯಾಚಾರಕ್ಕೊಳಗಾದ ಹೆಣ್ಣು ಸಾಮಾಜಿಕವಾಗಿ, ಮಾನಸಿಕವಾಗಿ ಕುಗ್ಗಿ ಕೂತಿರುವಾಗ ಈ ಪರಿಹಾರ ಆಕೆಗೆ ಒಂದಿಷ್ಟು ಬಲ ನೀಡಬಹುದು. ವೈದ್ಯಕೀಯ ವೆಚ್ಚ, ಸಂತ್ರಸ್ತರಿಗೆ ಪುನರ್ವಸತಿ ಇಷ್ಟೇ ಅಲ್ಲದೆ ಕಾನೂನು ಹೋರಾಟಕ್ಕೂ ಈ ಪರಿಹಾರ ಸಹಾಯ ಮಾಡಬಹುದು ಎನ್ನುವ ನಿಟ್ಟಿನಲ್ಲಿ ಸರಕಾರ ಈ ವ್ಯವಸ್ಥೆ ಮಾಡಿದೆ. ಆದರೆ ಈ ಪರಿಹಾರವನ್ನು ಅರ್ಹರಿಗೆ ತಲುಪದಂತೆ ಮಾಡುವಲ್ಲಿ ಅಧಿಕಾರಶಾಹಿ ವ್ಯವಸ್ಥೆ ತನ್ನ ಗರಿಷ್ಠ ಪ್ರಯತ್ನ ಮಾಡುತ್ತಾ ಬರುತ್ತಿದೆ. ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರ ದೂರುಗಳನ್ನು ಸ್ವೀಕರಿಸುವುದಕ್ಕೇ ಪೊಲೀಸರು ಮೀನಮೇಷ ಎಣಿಸುತ್ತಾರೆ. ಒಂದು ವೇಳೆ ಬೇರೆ ಒತ್ತಡಗಳ ಪರಿಣಾಮವಾಗಿ ದೂರು ಸ್ವೀಕರಿಸಲೇ ಬೇಕಾದ ಸನ್ನಿವೇಶ ನಿರ್ಮಾಣವಾಯಿತೆಂದರೆ, ಪರಿಹಾರ ನೀಡುವ ವಿಷಯದಲ್ಲಿ ಸಂತ್ರಸ್ತೆಯರನ್ನು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಾರೆ. ದಲಿತರು ಅಥವಾ ಶೋಷಿತ ಸಮುದಾಯದ ಬಡ ಮಹಿಳೆಯರು ಅನ್ಯಾಯಕ್ಕೊಳಗಾದರೆ ಅವರಿಗೆ ಪರಿಹಾರ ಕೊಟ್ಟಂತೆ ಮಾಡಿ, ಅದನ್ನು ಬೇರೆ ಮಧ್ಯವರ್ತಿಗಳು ಜೇಬಿಗಿಳಿಸುವುದೂ ನಡೆಯುತ್ತದೆ.

ಸುಪ್ರೀಂಕೋರ್ಟಿಗೆ ನೀಡಿರುವ ಒಂದು ವರದಿಯ ಪ್ರಕಾರ, 2017ರಲ್ಲಿ ಆಂಧ್ರಪ್ರದೇಶದಲ್ಲಿ ದಾಖಲಾದ 901 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗಿದೆ. ರಾಜಸ್ಥಾನದಲ್ಲಿ 2017ರಲ್ಲಿ 3,305 ಎಫ್‌ಐಆರ್‌ಗಳು ದಾಖಲಾದರೂ 140 ಸಂತ್ರಸ್ತರಿಗೆ ಮಾತ್ರ ಪರಿಹಾರ ದಕ್ಕಿದೆ. ಬಿಹಾರದಲ್ಲಿ 1,199 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ಪರಿಹಾರ ಪಡೆದುಕೊಂಡವರು ಬರೀ 82. ಇಷ್ಟಕ್ಕೂ ಅವರಿಗೆ ದೊರಕಿದ ಪರಿಹಾರವೆಷ್ಟು ಎಂದು ಅವಲೋಕಿಸಿದಾಗ, ರೂ. 7,000ಕ್ಕಿಂತ ಜಾಸ್ತಿ ಪರಿಹಾರ

ಅತ್ಯಾಚಾರ ಎಸಗಿದ ದುಷ್ಕರ್ಮಿಗೆ ಮರಣದಂಡನೆ ಶಿಕ್ಷೆ ನೀಡಬೇಕೋ ಬೇಡವೋ ಎನ್ನುವುದನ್ನು ವಿಶೇಷ ಆಸಕ್ತಿಯಿಂದ ಚರ್ಚಿಸುವ ಸಮಾಜ, ಅತ್ಯಾಚಾರಕ್ಕೊಳಗಾದ ಹೆಣ್ಣು ಪರೋಕ್ಷ ಶಿಕ್ಷೆ ಅನುಭವಿಸುವುದನ್ನು ತಪ್ಪಿಸುವ ದಾರಿಯ ಕುರಿತಂತೆ ಚಿಂತೆ ಮಾಡಬೇಕಾದ ಅಗತ್ಯವಿದೆ. ತಾನು ಮಾಡದ ತಪ್ಪಿಗೆ ಆಕೆ ಶಿಕ್ಷೆಯನ್ನು ಅನುಭವಿಸಬಾರದು. ಈ ನಿಟ್ಟಿನಲ್ಲಿ ಇಡಬಹುದಾದ ಮೊದಲ ಹೆಜ್ಜೆಯೆಂದರೆ, ಕಾನೂನು ಆದೇಶಿಸಿದ ಪರಿಹಾರವನ್ನು ಯಾವ ತೊಡಕೂ ಇಲ್ಲದಂತೆ ಆಕೆಗೆ ತಲುಪುವಂತೆ ನೋಡಿಕೊಳ್ಳುವುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News