×
Ad

ಸಾವಿಗೆ ಹೆದರುವ ವ್ಯಕ್ತಿ ನಾನಲ್ಲ: ಸಾಹಿತಿ ಪ್ರೊ.ಕೆ.ಎಸ್.ಭಗವಾನ್

Update: 2018-05-30 20:42 IST

ಮೈಸೂರು,ಮೇ.30: ನನ್ನ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರನ್ನು ಎಸ್.ಐ.ಟಿ ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಆದರೆ ಸಾವಿಗೆ ಹೆದರುವ ವ್ಯಕ್ತಿ ನಾನಲ್ಲ ಎಂದು ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಘು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಅವರು ಬುಧವಾರ ತಮ್ಮನ್ನು ಭೇಟಿ ಮಾಡಿದ 'ವಾರ್ತಾ ಭಾರತಿ' ಯೊಂದಿಗೆ ಮಾತನಾಡಿದರು. 'ನಾನು ಸಾವಿಗೆ ಎಂದೂ ಹೆದರಿದವನಲ್ಲ. ಈ ಹಿಂದೆಯೂ ಹಲವಾರು ಬಾರಿ ಬೆದರಿಕೆ ಕರೆಗಳು ಬರುತ್ತಿದ್ದವು. ಇದ್ಯಾವುದಕ್ಕೂ ನಾನು ಕೇರ್ ಮಾಡಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಂದರ್ಭದಲ್ಲಿ ನನ್ನ ಸಾವು ಸಂಭವಿಸಿದರೆ ಅದಕ್ಕಿಂತ ಬೇರೆ ಸಂತೋಷ ಇಲ್ಲ ಎಂದರು. 

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಮ್ಮ ಮನೆಯ ಬಳಿ ಬಂಧನಕ್ಕೊಳಗಾದ ವ್ಯಕ್ತಿ ಹಲವಾರು ದಿನಗಳಿಂದ ನಮ್ಮ ಮನೆಯ ಪಕ್ಕದ ಹೋಟೆಲ್‍ನಲ್ಲಿ ಬಂದು ಕೂರುತ್ತಿದ್ದ ಎಂದು ನಂತರ ಗೊತ್ತಾಯಿತು. ಆದರೆ ಆತ ಒಂದು ದಿನವೂ ನನ್ನ ಕಣ್ಣಿಗೆ ಬೀಳಲಿಲ್ಲ. ನಮ್ಮ ಮನೆ ಮತ್ತು ನನ್ನ ಜೊತೆ ಪೊಲೀಸರು ಸದಾ ಇರುವುದರಿಂದ ಕೊಲೆ ಯತ್ನ ಸಾಧ್ಯವಾಗಲಿಲ್ಲ ಎನ್ನಿಸುತ್ತದೆ ಎಂದು ಹೇಳಿದರು.

ನಾಲ್ವರು ಸಂಚುಕೋರರಿಗಷ್ಟೇ ನನ್ನನ್ನು ಕೊಲೆ ಮಾಡಲು ಸಾಧ್ಯವಿಲ್ಲ. ಇದರ ಹಿಂದೆ ಬೇರೆ ಯಾವುದೋ ಸಂಘಟನೆ, ಸಿದ್ಧಾಂತಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನ ಮೂಡುತ್ತಿದೆ. ಪೊಲೀಸರು ಅದನ್ನು ಪತ್ತೆ ಹಚ್ಚಿದರೆ ಮೂಲಭೂತವಾದವನ್ನು ತಡೆಗಟ್ಟಬಹುದು. ಮೂಲಭೂತವಾದಿಗಳಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೂಲಭೂತವಾದವನ್ನು ಸಂಪೂರ್ಣ ಹತ್ತಿಕ್ಕುವ ಕೆಲಸ ಮಾಡಬೇಕು. ಇದರಿಂದ ದೇಶಕ್ಕೆ ಅಂಟಿಕೊಂಡಿರುವ ಮೂಢ ನಂಬಿಕೆ, ಕಂದಾಚಾರ, ಕೊಲೆ, ಸುಲಿಗೆಗಳು ನಿಲುಗಡೆಗೆ ಬರುತ್ತವೆ ಎಂಬುದು ನನ್ನ ಭಾವನೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾವುಗಳು ನಡೆದುಕೊಳ್ಳಬೇಕು. ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವ ನಾವು ಕರ್ತವ್ಯ ಮರೆಯುತ್ತಿದ್ದೇವೆ.  ಸಂವಿಧಾನದ ಪರಿಚ್ಛೇದ 51 ಎ.ಎಚ್. ಅಡಿಯಲ್ಲಿ ನಾನು ನಡೆಯುತ್ತಿದ್ದೇನೆ ಎಂಬ ಹೆಮ್ಮೆ ಇದೆ ಎಂದು ಹೇಳಿದ ಅವರು, ಹಕ್ಕುಗಳ ಬಗ್ಗೆ ಮಾತನಾಡುವ ನಾನು ಕರ್ತವ್ಯವನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದರು.                                                           

ನಮ್ಮ ಎಸ್‍ಐಟಿ ಅಧಿಕಾರಿಗಳು ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಷ್ಟಾವಂತ ಅಧಿಕಾರಿಗಳು ಇರುವುದರಿಂದ ಇಂತಹ ಘಟನೆಗಳನ್ನು ಭೇದಿಸಲು ಸಾಧ್ಯ. ಗೌರಿ ಹತ್ಯೆಗೆ ಕಾರಣರಾದವರನ್ನು ಭೇದಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂಜಾಗ್ರತೆಯಿಂದ ನನಗೆ ಪೊಲೀಸರ ರಕ್ಷಣೆಯನ್ನು ಹಿಂದೆಯೇ ಒದಗಿಸಿದ್ದರು. ಅವರಿಗೆ ನಾನು ಕೃತಘ್ನನಾಗಿದ್ದೇನೆ. ಹೊಸದಾಗಿ ಬರೆದಿರುವ 'ರಾಮಮಂದಿರ ಏಕೆ ಬೇಡ' ಎಂಬ ಪುಸ್ತಕ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಅದರಲ್ಲಿ ರಾಮಾಯಣ ಮತ್ತು ರಾಮನ ಕುರಿತು ಹೊಸ ಆಯಾಮವನ್ನು ಬರೆದಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News