ಹಿರಿಯ ಪತ್ರಕರ್ತ ಟಿ.ವೆಂಕಟರಾಮ್ ನಿಧನ
ಮೈಸೂರು,ಮೇ.30: ಹಿರಿಯ ಪತ್ರಕರ್ತ ಹಾಗೂ ಮೈಸೂರು ಪತ್ರಿಕೆಯ ಸಂಪಾದಕ ಟಿ.ವೆಂಕಟರಾಮ್ ಇಂದು ನಿಧನರಾದರು.
ಮೃತರಿಗೆ (94) ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಮಧ್ಯಾಹ್ನ ಮೈಸೂರಿನ ವಿದ್ಯಾರಣ್ಯಪುರಂನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ರಾಜ್ಯೋತ್ಸವ, ಪತ್ರಿಕಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದ ವೆಂಕಟರಾಮ್, ಸಣ್ಣ ಪತ್ರಿಕೆಗಳ ಶಕ್ತಿಯನ್ನು ತಮ್ಮ ಹರಿತವಾದ ಲೇಖನದ ಮೂಲಕ ತಿಳಿಸಿ ಗಮನ ಸೆಳೆದಿದ್ದರು.
ಮೃತರು ಏಳು ಮಂದಿ ಪುತ್ರಿಯರು, ಓರ್ವ ಪುತ್ರ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ: ಹಿರಿಯ ಪತ್ರಕರ್ತ ಟಿ.ವೆಂಕಟರಾಮ್ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
ವೆಂಕಟರಾಮ್ ಅವರು ಪತ್ರಿಕೋದ್ಯಮವನ್ನೇ ಉಸಿರಾಗಿಸಿಕೊಂಡಿದ್ದರು. ಅವರ ಈ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು. ಶ್ರೀಯುತರ ಅಗಲಿಕೆಯಿಂದ ಉಂಟಾದ ದು:ಖ ಹಾಗೂ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.