ಚಿಕ್ಕಮಗಳೂರು: ಸಿಬಿಎಸ್‍ಇ ಪರೀಕ್ಷೆಯಲ್ಲಿ ಸಾಯಿ ಏಂಜಲ್ಸ್ ಶಾಲೆಯ ಸಾಂಚಿ ಜೈನ್ ಜಿಲ್ಲೆಗೆ ಪ್ರಥಮ
ಚಿಕ್ಕಮಗಳೂರು, ಮೇ 30: ಮಂಗಳವಾರ ಪ್ರಕಟವಾದ ಸಿಬಿಎಸ್‍ಇ ಪರೀಕ್ಷೆಯಲ್ಲಿ ನಗರದ ಸಿರಿಗಾಪುರ ಶ್ರೀ ಸಾಯಿ ಏಂಜಲ್ಸ್ ಶಾಲೆ ಶೇ.100 ಫಲಿತಾಂಶ ಪಡೆದಿದ್ದು, ಶಾಲೆಯ ವಿದ್ಯಾರ್ಥಿನಿ ಸಾಂಚಿ ಜೈನ್ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
102 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 65 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 21 ಪ್ರಥಮಶ್ರೇಣಿ ಹಾಗೂ 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ನೂರರಷ್ಟು ಫಲಿತಾಂಶ ಶಾಲೆಗೆ ಲಭಿಸಿದೆ. ಸಾಂಚಿ ಜೈನ್ ಇಂಗ್ಲೀಷ್‍ನಲ್ಲಿ 97, ಹಿಂದಿ 97, ಗಣಿತ 95, ವಿಜ್ಞಾನ 96, ಸಮಾಜ 98 ಸೇರಿ ಒಟ್ಟು 500ಕ್ಕೆ 483 ಅಂಕಗಳಿಸಿ ಜಿಲ್ಲೆಗೆ ಟಾಪರ್ ಆಗಿದ್ದಾಳೆ.
ದ್ವಿತೀಯ ಸ್ಥಾನ ಪಡೆದಿರುವ ಇದೇ ಶಾಲೆಯ ಗಿರಿಜಾ ಪಾಟೀಲ್ 478, ತೃತೀಯ ವೇದಾಂತ್ 477 ಮತ್ತು ಟಿ.ಎಸ್.ಅಂಕಿತ್, ಹೇಮಂತ್ ಅರಸ್, ಕೃಪಾಜೈನ್ ತಲಾ 475 ಗಳಿಸಿ ನಾಲ್ಕನೆ ಸ್ಥಾನ, ತನ್ಮಯ್ ಜೈನ್ 471 ಅಂಕ ಪಡೆದು ಐದನೆ ಸ್ಥಾನಗಳಿಸಿದ್ದಾರೆ.
ಜಿಲ್ಲೆಯ ಟಾಪರ್ ಸೇರಿದಂತೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಪ್ರಾಂಶುಪಾಲರಾದ ಯಾಮಿನಿ ಸವೂರ್ ಮತ್ತು ಉಪಪ್ರಾಂಶುಪಾಲರಾದ ರಾಧಿಕಾಸುರೇಶ್ ಸಿಹಿ ತಿನ್ನಿಸಿ ಹರ್ಷಿಸಿದರು.
ಪ್ರಾಂಶುಪಾಲರಾದ ಯಾಮಿನಿ ಸವೂರ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಾಯಿ ಏಂಜಲ್ಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ನೂರರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗುತ್ತಾ ಬಂದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅದರಲ್ಲೂ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ ಸಾಂಚಿ ಜೈನ್ 483 ಅಂಕಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರ ಶ್ರಮದಿಂದ ಇಂತಹ ಫಲಿತಾಂಶ ಬರಲು ಕಾರಣ ಎಂದರು.
ಸಂಸ್ಥೆ ಕಾರ್ಯದರ್ಶಿ ವಿಜಯಾನಾಗೇಶ್ ಮಾತನಾಡಿ, ಸಾಯಿ ಏಂಜಲ್ಸ್ ಸಂಸ್ಥೆ ಬೆಳ್ಳಿಹಬ್ಬದ ವರ್ಷದಲ್ಲಿ ಸಿಬಿಎಸ್‍ಇ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆಯುವ ಜೊತೆ ನಮ್ಮ ವಿದ್ಯಾರ್ಥಿನಿ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ಜಿಲ್ಲೆಯಲ್ಲಿ 2007ರಿಂದಲೂ ನಿರಂತರವಾಗಿ ನಮ್ಮ ಸಂಸ್ಥೆ ಶೇ100 ಫಲಿತಾಂಶವನ್ನು ಕಾಯ್ದಿರಿಸಿಕೊಳ್ಳುವಲ್ಲಿ ಸಫಲವಾಗಿದೆ. ಅದಲ್ಲದೆ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಸಿಬಿಎಸ್‍ಇ ಆರಂಭವಾದಾಗಿನಿಂದಲೂ ಸಾಯಿ ಏಂಜಲ್ಸ್ ಶಿಕ್ಷಣಸಂಸ್ಥೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಅತ್ಯನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಸಂತೋಷದ ವಿಷಯ ಎಂದರು.
ಮಳೆಯ ನಡುವೆ ವಿದ್ಯಾರ್ಥಿಗಳು ಪರಸ್ಪರ ಸಿಹಿತಿನ್ನಿಸಿ ಕುಣಿದು ನಲಿದಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕ ಹಾಗೂ ಶಿಕ್ಷಕ ಸಮೂಹ ಹಾಜರಿದ್ದರು.